ನವದೆಹಲಿ : ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಗರಣದ ಆರೋಪಗಳ ನಡುವೆಯೇ, ಮಂದಿರಕ್ಕೆ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಲೇಪಿತ ‘ರಾಮಚರಿತಮಾನಸ’ ಗ್ರಂಥವನ್ನು ಉಡುಗೊರೆಯಾಗಿ ನೀಡಿದ್ದ ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮೀನಾರಾಯಣನ್ ಅವರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಆರಂಭದಲ್ಲಿ ಭಕ್ತರ ದರ್ಶನಕ್ಕಾಗಿ ಇಡಲಾಗಿದ್ದ ಈ ಪವಿತ್ರ ಗ್ರಂಥವನ್ನು ಈಗ ಅಲ್ಲಿಂದ ಏಕಾಏಕಿ ತೆರವುಗೊಳಿಸಲಾಗಿದ್ದು, ಈ ಬಗ್ಗೆ ಮಂದಿರದ ಆಡಳಿತ ಮಂಡಳಿಯಿಂದ ಯಾವುದೇ ಸ್ಪಷ್ಟನೆ ಸಿಗುತ್ತಿಲ್ಲ ಎಂದು ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಚಿನ್ನ ಲೇಪಿತ ರಾಮಚರಿತಮಾನಸವು ಕೇವಲ ಒಂದು ಉಡುಗೊರೆಯಲ್ಲ, ಬದಲಿಗೆ ಇದು ನಮ್ಮ ಇಡೀ ಕುಟುಂಬದ ಸುದೀರ್ಘ ಆಧ್ಯಾತ್ಮಿಕ ಪ್ರಯಾಣದ ಫಲವಾಗಿದೆ ಎಂದು ಮಾಜಿ ಅಧಿಕಾರಿ ಹೇಳಿದ್ದಾರೆ. ಲಕ್ಷ್ಮೀನಾರಾಯಣನ್ ಅವರ ದಿವಂಗತ ತಾಯಿ ತಮ್ಮ ಜೀವನದ 15 ರಿಂದ 18 ವರ್ಷಗಳನ್ನು ರಾಮನಾಮ ಜಪ ಬರೆಯುವುದರಲ್ಲೇ ಕಳೆದಿದ್ದರು. ಅವರ ಇಡೀ ಕುಟುಂಬವು ದಶಕಗಳಿಂದ ರಾಮ ಜನ್ಮಭೂಮಿ ಚಳವಳಿಯೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಕನ್ಯಾಕುಮಾರಿಯಿಂದ ಚಳವಳಿಗೆ ಕಳುಹಿಸಲಾದ ಮೊದಲ ಇಟ್ಟಿಗೆ ಇವರ ಮಾವನವರ ಮನೆಯಿಂದಲೇ ಹೋಗಿತ್ತು. ನಿವೃತ್ತಿಯ ನಂತರ ತಮ್ಮ ಸಂಪಾದನೆಯ ಒಂದು ಭಾಗವನ್ನು ದೇವರಿಗೆ ಸಮರ್ಪಿಸಲು ನಿರ್ಧರಿಸಿದ ದಂಪತಿ, 2024ರ ಏಪ್ರಿಲ್‌ನಲ್ಲಿ ಈ ಗ್ರಂಥವನ್ನು ಮಂದಿರದ ಟ್ರಸ್ಟ್‌ಗೆ ಹಸ್ತಾಂತರಿಸಿದ್ದರು. ಬೆಳ್ಳಿ, ತಾಮ್ರ ಮತ್ತು ಚಿನ್ನದಿಂದ ಮಾಡಲ್ಪಟ್ಟ ಈ ಹಸ್ತಪ್ರತಿಯು ಸುಮಾರು 147 ಕೆಜಿ ತೂಕ ಹೊಂದಿದೆ. ಇದು ಗೋಸ್ವಾಮಿ ತುಳಸೀದಾಸರ ರಾಮಚರಿತಮಾನಸದ ಎಲ್ಲಾ 10,902 ಶ್ಲೋಕಗಳನ್ನು ಒಳಗೊಂಡಿರುವ 522 ಚಿನ್ನ ಲೇಪಿತ ಪುಟಗಳನ್ನು ಹೊಂದಿದೆ.
ಪ್ರದರ್ಶನದಲ್ಲಿದ್ದ ಗ್ರಂಥ ದಿಢೀರ್ ಮಾಯ
ಆರಂಭದಲ್ಲಿ ರಾಮಚರಿತಮಾನಸವನ್ನು ಗರ್ಭಗುಡಿಯ ಬಳಿ ಇಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ನಂತರ ಅಲ್ಲಿ ಜಾಗವಿಲ್ಲದ ಕಾರಣ ಬೇರೆಡೆ ಇಡಲಾಯಿತು. ಸುಮಾರು ಐದು ತಿಂಗಳ ಕಾಲ ಭಕ್ತರು ಇದರ ದರ್ಶನ ಪಡೆದು ಪೂಜಿಸುತ್ತಿದ್ದರು. ಆದರೆ ನಂತರ ಅದು ಇದ್ದಕ್ಕಿದ್ದಂತೆ ಮಾಯವಾಯಿತು” ಎಂದು ಲಕ್ಷ್ಮೀನಾರಾಯಣನ್ ಆರೋಪಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಲು ತಾವು ಹಲವು ಬಾರಿ ಮಂದಿರಕ್ಕೆ ಹೋಗಿ ಸಂಬಂಧಪಟ್ಟವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ, ಮಂದಿರದ ಅಧಿಕಾರಿಗಳಿಂದ ಯಾವುದೇ ತೃಪ್ತಿಕರ ಉತ್ತರ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಆಡಳಿತ ಮಂಡಳಿಯ ವೈಫಲ್ಯ
ಮಂದಿರದ ದೇಣಿಗೆ ಹಗರಣದ ಸುದ್ದಿಗಳು ಮಾಧ್ಯಮಗಳಲ್ಲಿ ಬಂದಾಗಿನಿಂದ, ಪರಿಚಯಸ್ಥರೆಲ್ಲರೂ ನೀವು ನೀಡಿದ ಉಡುಗೊರೆ ಸುರಕ್ಷಿತವಾಗಿದೆಯೇ? ಎಂದು ಕೇಳಲು ಪ್ರಾರಂಭಿಸಿದ್ದು, ಇದು ನಮ್ಮ ಮಾನಸಿಕ ನೆಮ್ಮದಿಯನ್ನೇ ಕೆಡಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಮಂದಿರದ ದೇಣಿಗೆಗಳ ಸಂಪೂರ್ಣ ಆಡಿಟ್ ನಡೆಸುವಂತೆ ಮತ್ತು ಭಕ್ತರ ಕಾಣಿಕೆಗಳು ಸರಿಯಾದ ಲೆಕ್ಕದಲ್ಲಿವೆಯೇ ಎಂಬುದನ್ನು ಪತ್ತೆಹಚ್ಚುವಂತೆ ಮನವಿ ಮಾಡಿದ್ದಾರೆ.
ಇದೇ ವಿಷಯವನ್ನು ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಗಮನಕ್ಕೂ ತಂದಿದ್ದು, ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವತ್ ಅವರು ಇವರ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿ ನೆರವಾಗುವ ಭರವಸೆ ನೀಡಿದ್ದರು. ಆದರೆ ಇಷ್ಟು ದಿನ ಕಳೆದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ ಎನ್ನಲಾಗಿದೆ.
ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ನಿರ್ಗಮನದ ಕುರಿತು ಮಾತನಾಡಿದ ಅವರು, ಯಾರದೇ ಉಸ್ತುವಾರಿಯಲ್ಲಿ ಇಂತಹ ಘಟನೆ ನಡೆದಾಗ ನೈತಿಕ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ ಅನಿವಾರ್ಯವಾಗುತ್ತದೆ ಎಂದಿದ್ದಾರೆ. ತಮಗೆ ಯಾವುದೇ ಪ್ರಚಾರ ಅಥವಾ ಪ್ರಶಸ್ತಿಯ ಆಕಾಂಕ್ಷೆಯಿಲ್ಲ ಎಂದಿರುವ ಮಾಜಿ ಅಧಿಕಾರಿ, ಭಕ್ತರು ಅತ್ಯಂತ ಶ್ರದ್ಧೆ ಮತ್ತು ನಂಬಿಕೆಯಿಂದ ನೀಡಿದ ಕಾಣಿಕೆಗಳಿಗೆ ಮಂದಿರದ ಮ್ಯಾನೇಜ್‌ಮೆಂಟ್‌ನಲ್ಲಿ ಪಾರದರ್ಶಕತೆ ಇರಬೇಕು ಮತ್ತು ಆ ಚಿನ್ನದ ಗ್ರಂಥವನ್ನು ಮತ್ತೆ ಅದರ ಹಳೆಯ ಸ್ಥಾನದಲ್ಲಿ ಮರುಸ್ಥಾಪಿಸಬೇಕು ಎನ್ನುವುದೇ ನಮ್ಮ ಏಕೈಕ ಬೇಡಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಹೊರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ಸೇವಾ ಶುಲ್ಕ ಖಚಿತ – ಮಿತ್ರ ರಾಷ್ಟ್ರಗಳಿಗೆ ‘ವಿಶೇಷ’ ರಿಯಾಯಿತಿ!


















