ಬೆಂಗಳೂರು : ಜಾಗತಿಕ ಅನಿಶ್ಚಿತತೆಯಿಂದಾಗಿ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿದಿದ್ದು, ಜನ ಸುರಕ್ಷಿತ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರ ಮಧ್ಯೆಯೇ, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದ್ದು, ಸ್ಥಿರ ಠೇವಣಿ (Fixed Deposit – FD) ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಈ ಹೊಸ ಬದಲಾವಣೆಯೊಂದಿಗೆ ಹಿರಿಯ ನಾಗರಿಕರು ಈಗ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಎಫ್ ಡಿ ಯೋಜನೆಯಲ್ಲಿ ಹಿರಿಯ ನಾಗರಿಕರು ಗರಿಷ್ಠ 8.50% ವರೆಗೆ ಬಡ್ಡಿದರವನ್ನು ಗಳಿಸಬಹುದು. ಸಾಮಾನ್ಯ ಗ್ರಾಹಕರಿಗೆ ಕೂಡ ಸ್ಪರ್ಧಾತ್ಮಕ ಬಡ್ಡಿದರಗಳನ್ನು ನೀಡಲಾಗುತ್ತಿದ್ದು, ಇದು ಠೇವಣಿಯ ಅವಧಿಗೆ ಅನುಗುಣವಾಗಿ ಬದಲಾಗುತ್ತದೆ. ಗ್ರಾಹಕರು ಕೇವಲ 1,000 ರೂಪಾಯಿ ಕನಿಷ್ಠ ಮೊತ್ತದೊಂದಿಗೆ ತಮ್ಮ ಎಫ್ ಡಿ ಹೂಡಿಕೆಯನ್ನು ಪ್ರಾರಂಭಿಸಬಹುದು.
ಈ ಬ್ಯಾಂಕ್ ನಲ್ಲಿ 7 ದಿನಗಳಿಂದ ಹಿಡಿದು 10 ವರ್ಷಗಳವರೆಗೆ ವಿವಿಧ ಅವಧಿಗಳಿಗೆ ಠೇವಣಿ ಇಡುವ ಅವಕಾಶವಿದೆ. ಗ್ರಾಹಕರು ಶಾಖೆಗೆ ಭೇಟಿ ನೀಡದೆಯೇ ಆನ್ಲೈನ್ ಮೂಲಕ ಸುಲಭವಾಗಿ ಎಫ್ಡಿ ಖಾತೆಯನ್ನು ತೆರೆಯಬಹುದು. ಅಗತ್ಯ ಬಿದ್ದರೆ, ಎಫ್ಡಿ ಮೊತ್ತದ ಮೇಲೆ 90% ವರೆಗೆ ಸಾಲ ಪಡೆಯುವ ಸೌಲಭ್ಯವನ್ನೂ ಬ್ಯಾಂಕ್ ಒದಗಿಸುತ್ತಿದೆ. ಬ್ಯಾಂಕ್ ನಲ್ಲಿ ‘ಟ್ಯಾಕ್ಸ್ ಸೇವರ್’ ಎಫ್ ಡಿ ಸೌಲಭ್ಯವಿದ್ದು, ಇದು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ.
ಬಡ್ಡಿದರಗಳ ಕುರಿತು ಮಾಹಿತಿ
ಸಾಮಾನ್ಯ ಗ್ರಾಹಕರಿಗೆ ಬಡ್ಡಿ
• 7 ರಿಂದ 14 ದಿನಗಳ ಅವಧಿಯ ಠೇವಣಿಗಳಿಗೆ ಬಡ್ಡಿ ದರವು 4% ರಿಂದ ಪ್ರಾರಂಭವಾಗುತ್ತದೆ.
• 6 ತಿಂಗಳ ಠೇವಣಿಗಳಿಗೆ ಬಡ್ಡಿ ದರವು 6.50%ಕ್ಕೆ ಏರುತ್ತದೆ.
• 1 ವರ್ಷದ ಅವಧಿಯ ಠೇವಣಿಗಳು 7.25% ಬಡ್ಡಿಯನ್ನು ನೀಡುತ್ತವೆ.
• 18 ತಿಂಗಳ ಎಫ್ ಡಿಗಳ ಮೇಲೆ 7.80% ಮತ್ತು 30 ತಿಂಗಳ ಎಫ್ ಡಿಗಳ ಮೇಲೆ 8.10% ಬಡ್ಡಿ ಡಲಾಗುತ್ತಿದೆ.
• 5 ವರ್ಷಗಳ ಎಫ್ ಡಿಯು 8.25%ರಷ್ಟು ಬಡ್ಡಿ ಹೊಂದಿದೆ.
ಹಿರಿಯ ನಾಗರಿಕರಿಗೆ ವಿಶೇಷ ಬಡ್ಡಿ
• 6 ತಿಂಗಳು ಮತ್ತು 1 ದಿನದ ಠೇವಣಿಗಳ ಮೇಲೆ ಶೇಕಡಾ 6.65% ಬಡ್ಡಿ ಸಿಗುತ್ತದೆ.
• 1 ವರ್ಷದ ಠೇವಣಿಗಳ ಮೇಲೆ 7.40% ರಷ್ಟು ಬಡ್ಡಿ ನೀಡಲಾಗುತ್ತದೆ.
• 18 ತಿಂಗಳ ಠೇವಣಿಗಳ ಮೇಲೆ 7.95% ಮತ್ತು 30 ತಿಂಗಳ ಠೇವಣಿಗಳ ಮೇಲೆ 8.25% ಬಡ್ಡಿದರವಿರುತ್ತದೆ.
• ಹಿರಿಯ ನಾಗರಿಕರಿಗೆ 5 ವರ್ಷಗಳ ಎಫ್ ಡಿ ಮೇಲೆ 8.50% ರಷ್ಟು ಬಡ್ಡಿದರ ಸಿಗಲಿದೆ.
ಗಮನಿಸಿ :
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್ ಡಿ ಹೂಡಿಕೆಯ ಬಗ್ಗೆ ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಲಾಗಿದೆ. ಇದು ಹೂಡಿಕೆಗೆ ನಾವು ಮಾಡುವ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರ ಸಲಹೆ-ಸೂಚನೆ ಪಡೆಯುವುದನ್ನು ಮರೆಯದಿರಿ.
ಇದನ್ನೂ ಓದಿ : ತಮಿಳುನಾಡು ಶಾಸಕರಿಗೆ ಸಿಎಂ ವಿಜಯ್ ಬಂಪರ್ ಕೊಡುಗೆ : ಸರ್ಕಾರಿ ಕಾರು, ಭತ್ಯೆ, ಆರೋಗ್ಯ ವಿಮೆ ಹೆಚ್ಚಳ


















