ಸೂರತ್ : ಮುಂಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಪ್ರಸಿದ್ಧ ಗೋಲ್ಡನ್ ಟೆಂಪಲ್ ಎಕ್ಸ್ಪ್ರೆಸ್ (Golden Temple Express) ರೈಲಿನಲ್ಲಿ ಅಚ್ಚರಿಯ ಹಾಗೂ ದುರಂತ ಘಟನೆಯೊಂದು ಸಂಭವಿಸಿದೆ. ರೈಲಿನಲ್ಲಿ ಪ್ರಯಾಣಿಕರೊಂದಿಗೆ ಜಗಳವಾಡಿ, ಅವರ ಮೇಲೆ ಅಗ್ನಿಶಾಮಕ ಸಿಲಿಂಡರ್(ಫೈರ್ ಎಕ್ಸ್ಟಿಂಗ್ವಿಷರ್)ನಲ್ಲಿನ ದ್ರವ ಸಿಂಪಡಿಸಿ ರಂಪಾಟ ನಡೆಸಿದ್ದ ವಿದೇಶಿ ಪ್ರಜೆಯೊಬ್ಬನನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ವಿಚಾರಣೆಯ ವೇಳೆಯಲ್ಲೇ ಆತ ಕುಸಿದುಬಿದ್ದು ಮೃತಪಟ್ಟಿದ್ದಾನೆ.
ಆಗಿದ್ದೇನು?
ಮುಂಬೈನ ಬಾಂದ್ರಾ ಟರ್ಮಿನಸ್ನಿಂದ ಹೊರಟಿದ್ದ ಈ ರೈಲಿನ ಸಾಮಾನ್ಯ ಬೋಗಿಯಲ್ಲಿ (General Coach) ಪ್ರಯಾಣಿಸುತ್ತಿದ್ದ ಈ ವಿದೇಶಿ ಪ್ರಜೆ, ದಿಢೀರನೆ ಸಹಪ್ರಯಾಣಿಕರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಗಲಾಟೆ ಆರಂಭಿಸಿದ್ದಾನೆ. ವಿಷಯ ತಿಳಿದ ರೈಲ್ವೇ ರಕ್ಷಣಾ ಪಡೆ (RPF) ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಆತ ಮತ್ತಷ್ಟು ಆಕ್ರೋಶಗೊಂಡು, ಬೋಗಿಯಲ್ಲಿದ್ದ ಫೈರ್ ಎಕ್ಸ್ಟಿಂಗ್ವಿಷರ್ ತೆಗೆದುಕೊಂಡು ಪ್ರಯಾಣಿಕರ ಮುಖ ಮತ್ತು ಮೈಮೇಲೆ ಸಿಂಪಡಿಸಲು ಪ್ರಾರಂಭಿಸಿದ್ದಾನೆ.
ಪ್ರಯಾಣಿಕರಿಂದ ದಾಳಿ
ವಿದೇಶಿ ಪ್ರಜೆಯ ಈ ಹಠಾತ್ ವರ್ತನೆಯಿಂದ ಆಕ್ರೋಶಗೊಂಡ ಬೋಗಿಯಲ್ಲಿದ್ದ ಕೆಲವು ಪ್ರಯಾಣಿಕರು ಆತನನ್ನು ತಡೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ರೈಲು ಸೂರತ್ ರೈಲು ನಿಲ್ದಾಣ ತಲುಪುತ್ತಿದ್ದಂತೆ ಜಾಗರೂಕರಾದ ರೈಲ್ವೇ ಪೊಲೀಸರು, ತೀವ್ರ ಹಂಗಾಮಾ ಸೃಷ್ಟಿಸುತ್ತಿದ್ದ ಆತನನ್ನು ಕಷ್ಟಪಟ್ಟು ಹತೋಟಿಗೆ ತಂದು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಕುಸಿದುಬಿದ್ದು ಸಾವು: ಸಾಕ್ಷ್ಯಾಧಾರಗಳೇ ಇಲ್ಲ!
ವಶಕ್ಕೆ ಪಡೆದ ವ್ಯಕ್ತಿಯನ್ನು ಸೂರತ್ನ ಆರ್ಪಿಎಫ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾಗ, ಆತ ದಿಢೀರನೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಸಾವಿಗೀಡಾದ ವ್ಯಕ್ತಿಗೆ ಸುಮಾರು 45 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಆತನ ಬಳಿ ಪಾಸ್ಪೋರ್ಟ್, ವೀಸಾ ಅಥವಾ ಯಾವುದೇ ಗುರುತಿನ ಚೀಟಿಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸೂರತ್ ರೈಲ್ವೇ ಪೊಲೀಸರು ಸದ್ಯ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಸಾವಿಗೆ ನಿಖರ ಕಾರಣವೇನು ಹಾಗೂ ಆತನ ಹಿನ್ನೆಲೆ ಏನು ಎಂಬುದರ ಕುರಿತು ವಿಸ್ತೃತ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿ 18 ವರ್ಷ : ಸಾಧಾರಣ ಆರಂಭದಿಂದ ವಿಶ್ವ ಕ್ರಿಕೆಟ್ನ ‘ಕಿಂಗ್’ ಆಗಿ ಬೆಳೆದ ರೋಚಕ ಹಾದಿ!



















