ಚೆನ್ನೈ : ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವು ರಾಜ್ಯ ವಿಧಾನಸಭೆಯ ಎಲ್ಲ ಶಾಸಕರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಎಲ್ಲ 234 ಶಾಸಕರಿಗೆ ಉಚಿತ ಸರ್ಕಾರಿ ವಾಹನ, ಮಾಸಿಕ ಭತ್ಯೆ ಹಾಗೂ ಆರೋಗ್ಯ ರಕ್ಷಣೆ ವ್ಯಾಪ್ತಿಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ವಿಧಾನಸಭಾ ಕಲಾಪದಲ್ಲೇ ಮುಖ್ಯಮಂತ್ರಿ ಜೋಸೆಫ್ ವಿಜಯ್ ಘೋಷಿಸಿದ್ದಾರೆ.
ಏನೇನು ಘೋಷಣೆ?
ರಾಜ್ಯದ ಪ್ರತಿಯೊಬ್ಬ ಶಾಸಕರಿಗೂ ಕ್ಷೇತ್ರ ಪ್ರವಾಸ ಮತ್ತು ಜನಸೇವೆಯ ಸುಲಭ ನಿರ್ವಹಣೆಗಾಗಿ ಸರ್ಕಾರಿ ಕಾರನ್ನು ಒದಗಿಸಲಾಗುತ್ತದೆ. ಇದರ ಜೊತೆಗೆ ವಾಹನದ ಇಂಧನ, ಚಾಲಕನ ವೇತನ ಹಾಗೂ ನಿರ್ವಹಣಾ ವೆಚ್ಚಕ್ಕಾಗಿ ಪ್ರತಿ ತಿಂಗಳು 75,000 ರೂ. ಭತ್ಯೆಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬ ಶಾಸಕರಿಗೂ ಒಬ್ಬ ಅಧಿಕೃತ ಕಾರ್ಯದರ್ಶಿಯನ್ನು (ಸಹಾಯಕ) ನೇಮಿಸಿಕೊಳ್ಳಲು ಮಾಸಿಕ 25,000 ಅನುದಾನ ನೀಡಲು ಸರ್ಕಾರ ತೀರ್ಮಾನಿಸಿದೆ.
ಆರೋಗ್ಯ ವಿಮೆ 25 ಲಕ್ಷ ರೂ.ಗೆ ಏರಿಕೆ
ಶಾಸಕರ ಆರೋಗ್ಯ ಭದ್ರತೆಗೆ ಸಂಬಂಧಿಸಿದಂತೆಯೂ ದೊಡ್ಡ ಮಟ್ಟದ ಸುಧಾರಣೆ ತರಲಾಗಿದ್ದು, ಪ್ರಸ್ತುತ ಇರುವ 5 ಲಕ್ಷ ರೂ. ಮೊತ್ತದ ಉಚಿತ ಆರೋಗ್ಯ ವಿಮಾ ರಕ್ಷಣೆಯನ್ನು ಬರೋಬ್ಬರಿ 25 ಲಕ್ಷ ರೂ.ಗೆ ಏರಿಸಲಾಗಿದೆ.
ನಿರ್ಧಾರವನ್ನು ಸಮರ್ಥಿಸಿಕೊಂಡ ಸಿಎಂ
ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ವಿಜಯ್, “ಶಾಸಕರು ತಮ್ಮ ಕ್ಷೇತ್ರಗಳಿಗೆ ಆಗಾಗ್ಗೆ ಭೇಟಿ ನೀಡಿ ಜನರ ಕುಂದುಕೊರತೆಗಳನ್ನು ಆಲಿಸಬೇಕಾಗುತ್ತದೆ. ಸರ್ಕಾರಿ ವಾಹನ ಒದಗಿಸುವುದರಿಂದ ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ನೆರವಾಗುತ್ತದೆ” ಎಂದಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿ ಅನೇಕ ನೂತನ ಶಾಸಕರಿದ್ದು, ಅವರು ಸಾಮಾನ್ಯ ಹಾಗೂ ಬಡ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಹೀಗಾಗಿ ತಮ್ಮ ಕರ್ತವ್ಯವನ್ನು ಸುಲಭವಾಗಿ ನಿರ್ವಹಿಸಲು ವಾಹನದ ಅಗತ್ಯವಿದೆ ಎಂದು ಅವರು ವಿವರಿಸಿದ್ದಾರೆ.
ಇದಕ್ಕೂ ಮುನ್ನ ಸದನದಲ್ಲಿ ಶಾಸಕರಾದ ಜೋತಿಮಣಿ ಅವರು “ಸರಿಯಾದ ಸಾರಿಗೆ ಸೌಲಭ್ಯಗಳಿಲ್ಲದೆ ಶಾಸಕರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ” ಎಂದು ಅಳಲು ತೋಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ಸಿಎಂ ವಿಜಯ್ ತಕ್ಷಣವೇ ಈ ಕೊಡುಗೆಗಳನ್ನು ಘೋಷಿಸಿದರು.
ಕಾಂಗ್ರೆಸ್ ಶಾಸಕಿ ತರಗೈ ಕತ್ಬರ್ಟ್ ಸರ್ಕಾರದ ಈ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದು, ಇದರಿಂದ ಎಲ್ಲಾ ಶಾಸಕರಿಗೂ ಅಪಾರ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ ಅವರು ಮಾತನಾಡಿ, ಈ ನಿರ್ಧಾರದಿಂದ ಶಾಸಕರಿಗೆ ಕೆಲಸ ಮಾಡಲು ಅನುಕೂಲವಾಗುವುದರ ಜೊತೆಗೆ, ನೂರಾರು ಚಾಲಕರು ಮತ್ತು ಕಾರ್ಯದರ್ಶಿಗಳಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ.
ವಿಪಕ್ಷ ಡಿಎಂಕೆ ತೀವ್ರ ಆಕ್ಷೇಪ
ಆದರೆ, ವಿಪಕ್ಷ ಡಿಎಂಕೆ (DMK) ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಡಿಎಂಕೆ ವಕ್ತಾರ ಎ. ಶರವಣನ್ ಪ್ರತಿಕ್ರಿಯಿಸಿ, “ಇದು ಸಂಪೂರ್ಣ ಅನಗತ್ಯ ವೆಚ್ಚ. 234 ಶಾಸಕರಿಗೆ ಕಾರುಗಳು ಹಾಗೂ ಹೆಚ್ಚಿನ ಭತ್ಯೆಗಳನ್ನು ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ಹೊರೆಯಾಗಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ನಿರ್ಧಾರದ ಅಗತ್ಯ ಏನಿತ್ತು?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಹೊಳೆಯಲ್ಲಿ ತೆಪ್ಪ ಮುಳುಗಿ ಮೂವರು ನಾಪತ್ತೆ ; ಓರ್ವನ ಮೃತದೇಹ ಪತ್ತೆ


















