ಬೆಂಗಳೂರು : ಮಧ್ಯಪ್ರಾಚ್ಯದ ಸಂಘರ್ಷ ತಿಳಿಯಾಗಿ ಈಗ ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ, ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಅಕ್ರಮವನ್ನು ತಡೆಯಲು ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಹಾಗಾಗಿ, ಎಲ್‌ಪಿಜಿ ಸಿಲಿಂಡರ್ ಸಂಪರ್ಕ ಹೊಂದಿದವರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕಾಗಿದೆ. ಇ-ಕೆವೈಸಿ ಮುಗಿಸಲು ಆಗಸ್ಟ್ 16ರ ಗಡುವು ನೀಡಲಾಗಿದೆ. ಹಾಗಾಗಿ, ಕೂಡಲೇ ಗ್ರಾಹಕರು ಇ-ಕೆವೈಸಿ ಮುಗಿಸಿ, ಎಲ್‌ಪಿಜಿ ಸಂಪರ್ಕವನ್ನು ನಿರುಮ್ಮಳವಾಗಿ ಮುಂದುವರಿಸಬಹುದಾಗಿದೆ.
ಗ್ರಾಹಕರು ಇಲ್ಲಿ ಮತ್ತೊಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನೀವು ದೀರ್ಘಕಾಲದವರೆಗೆ KYC ಪೂರ್ಣಗೊಳಿಸದಿದ್ದರೆ, ನಿಮ್ಮ ಗ್ಯಾಸ್ ಸಂಪರ್ಕವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ಹಾಗೆಯೇ, ಸರ್ಕಾರವು ಎಲ್ ಪಿಜಿ ಸಿಲಿಂಡರ್ ಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ಕೂಡ ನಿಲ್ಲಿಸಬಹುದು.
ಇ-ಕೆವೈಸಿ ಮುಗಿಸಲು ನೀವು ಗ್ಯಾಸ್ ಏಜೆನ್ಸಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಮನೆಯಿಂದಲೇ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು. ಮೊಬೈಲ್ ನಲ್ಲಿ ಪೂರ್ಣಗೊಳಿಸಲು ಆಗದಿರುವವರು ಆಯಾ ಕಂಪನಿಯ ಗ್ಯಾಸ್ ಏಜೆನ್ಸಿಗಳನ್ನು ಸಂಪರ್ಕಿಸಬಹುದು.
ಮೊಬೈಲ್ ನಲ್ಲೇ ಪೂರ್ಣಗೊಳಿಸಿ ಪ್ರಕ್ರಿಯೆ
• ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ನೀವು ಬಳಸುತ್ತಿರುವ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ ಇನ್ ಸ್ಟಾಲ್ ಮಾಡಿ.
• ನಿಮ್ಮ ಗ್ಯಾಸ್ ಕನೆಕ್ಷನ್ ಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ.
• ಫೋನ್ ನಲ್ಲಿ Aadhaar FaceRD ಆ್ಯಪ್ ಡೌನ್ ಲೋಡ್ ಮಾಡಿ (ಇದು ಮುಖದ ಪರಿಶೀಲನೆಗೆ – Face Verification ಸಹಾಯ ಮಾಡುತ್ತದೆ).
• ಗ್ಯಾಸ್ ಆ್ಯಪ್ ನ ಪ್ರೊಫೈಲ್ ವಿಭಾಗಕ್ಕೆ (Profile Section) ಹೋಗಿ e-KYC / Re-KYC ಮೇಲೆ ಕ್ಲಿಕ್ ಮಾಡಿ.
• ಕ್ಯಾಮೆರಾ ಓಪನ್ ಆಗುತ್ತದೆ, ಸರಿಯಾದ ಬೆಳಕಿನಲ್ಲಿ ನಿಮ್ಮ ಮುಖವನ್ನು ತೋರಿಸಿ ಕಣ್ಣುಗಳನ್ನು ಮಿಣುಕಿಸಿ (Blink).
• ವೆರಿಫಿಕೇಶನ್ ಪೂರ್ಣಗೊಂಡ ಬಳಿಕ ಒಟಿಪಿ (OTP) ನಮೂದಿಸಿ ಸಬ್ಮಿಟ್ ಮಾಡಿ. ಆಗ ನಿಮ್ಮ ಇ-ಕೆವೈಸಿ ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ : ಜೆಮಿಮಾಗೆ ಗಾಯದ ಹೊಡೆತ : ‘ದಿ ಹಂಡ್ರೆಡ್’ನಿಂದ ಭಾರತದ ಸ್ಟಾರ್ ಬ್ಯಾಟರ್ ಔಟ್!



















