ನವದೆಹಲಿ : ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಇತ್ತೀಚೆಗಷ್ಟೇ ದಿಢೀರ್ ರಾಜೀನಾಮೆ ನೀಡಿರುವ ಶೆಹಜಾದ್ ಪೂನಾವಾಲ, ತಮ್ಮ ರಾಜೀನಾಮೆಗೆ ಹಣಕಾಸಿನ ಮುಗ್ಗಟ್ಟು ಹಾಗೂ ವೈಯಕ್ತಿಕ ಕಾರಣಗಳೇ ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ರಾಜೀನಾಮೆಯ ನಂತರ ನೀಡಿದ ತಮ್ಮ ಮೊದಲ ಮಾಧ್ಯಮ ಸಂದರ್ಶನದಲ್ಲಿ, ಟಿವಿ ಚರ್ಚೆಗಳ ಪ್ರಮುಖ ಮುಖವಾಗಿದ್ದ ಅವರು ತಮ್ಮ ಆರ್ಥಿಕ ಸಂಕಷ್ಟಗಳನ್ನು ತೆರೆದಿಟ್ಟಿದ್ದಾರೆ.
ಸಂದರ್ಶನದಲ್ಲಿ ರಾಜೀನಾಮೆಯ ಮೂಲ ಕಾರಣವನ್ನು ವಿವರಿಸಿದ ಶೆಹಜಾದ್, “ರಾಜಕೀಯ ಪಕ್ಷಗಳು ತಮ್ಮ ವಕ್ತಾರರಿಗೆ ಯಾವುದೇ ಮಾಸಿಕ ವೇತನ ನೀಡುವುದಿಲ್ಲ. ಆದರೆ ನಾನು ನನ್ನ ಮನೆಯ ಬಾಡಿಗೆ ಪಾವತಿಸಬೇಕಾಗಿದೆ. ನಾನು ಬಿಜೆಪಿಯಲ್ಲಿದ್ದೇನೆ ಎಂಬ ಕಾರಣಕ್ಕೆ ಮನೆಯ ಮಾಲೀಕರು ಉಚಿತವಾಗಿ ಇರಲು ಬಿಡುವುದಿಲ್ಲ. ಪ್ರತಿ ತಿಂಗಳ 1ನೇ ತಾರೀಖಿಗೆ ಬಾಡಿಗೆ ಕೇಳುತ್ತಾರೆ” ಎಂದು ತಮ್ಮ ನೈಜ ಆರ್ಥಿಕ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡುವುದು ಉದ್ಯೋಗವಲ್ಲ, ಅದು ಸಿದ್ಧಾಂತಕ್ಕೆ ನೀಡುವ ಕೊಡುಗೆಯಾಗಿದೆ ಎಂದು ಅವರು ತಿಳಿಸಿದರು.
‘ಲೇತಾ’ ಅಥವಾ ‘ಬೇತಾ’ ನೆರಳಿನ ರಾಜಕಾರಣಿಯಲ್ಲ!
ತಮ್ಮ ಕೌಟುಂಬಿಕ ಹಿನ್ನೆಲೆಯ ಕುರಿತು ಮಾತನಾಡಿದ ಅವರು, “ಇಂದಿನ ರಾಜಕಾರಣದಲ್ಲಿ ಬಹುತೇಕರು ಅಕ್ರಮವಾಗಿ ಹಣ ಗಳಿಸುವ ‘ಲೇತಾ'(ಲಾಭ ಗಳಿಸುವುದು) ವರ್ಗಕ್ಕೆ ಅಥವಾ ಪ್ರಭಾವಿ ರಾಜಕಾರಣಿಗಳ ಮಕ್ಕಳಾದ ‘ಬೇಟಾ’ (ಸ್ವಜನಪಕ್ಷಪಾತ) ವರ್ಗಕ್ಕೆ ಸೇರಿರುತ್ತಾರೆ. ಆದರೆ ನಾನು ಮೊದಲ ಪೀಳಿಗೆಯ ರಾಜಕಾರಣಿ. ಯಾವುದೇ ರಾಜಕೀಯ ಪರಂಪರೆ ಇಲ್ಲದೆ ಹೊಸದಾಗಿ ಬಂದ ನನಗೆ ನನ್ನ ಜೀವನೋಪಾಯಕ್ಕೆ ಆದಾಯದ ಅಗತ್ಯವಿದೆ. ಬಿಜೆಪಿಯನ್ನು ನಾನು ಉದ್ಯೋಗವೆಂದು ಭಾವಿಸಿಲ್ಲ, ಅದು ನನ್ನ ವೈಚಾರಿಕ ವೇದಿಕೆ ಮಾತ್ರ” ಎಂದಿದ್ದಾರೆ.
ಸೋಷಿಯಲ್ ಮೀಡಿಯಾ ವದಂತಿಗಳಿಗೆ ತೆರೆ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಸ್ಟಿಂಗ್ ಕಾರ್ಯಾಚರಣೆ’ ವಿಡಿಯೋ ಸೇರಿದಂತೆ ಯಾವುದೇ ಸಂಚಿನ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, 2024 ರಿಂದಲೇ ತಾವು ಈ ಬಗ್ಗೆ ಆಲೋಚಿಸುತ್ತಿದ್ದುದಾಗಿ ತಿಳಿಸಿದ್ದಾರೆ. ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಲಾದ ಆಂತರಿಕ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದಾಗ, “ಯಾವುದೇ ಸಂಸ್ಥೆ ಅಥವಾ ರಾಜಕೀಯ ಪಕ್ಷಗಳಲ್ಲಿ ಕೆಲಸ ಮಾಡುವಾಗ ಎಲ್ಲರೊಂದಿಗಿನ ಬಾಂಧವ್ಯ ಸುಗಮವಾಗಿರಲು ಸಾಧ್ಯವಿಲ್ಲ, ಪ್ರತಿಯೊಬ್ಬರನ್ನು ಎಳೆಯುವ ಪ್ರಯತ್ನಗಳು ರಾಜಕೀಯ ಜೀವನದ ಭಾಗ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಪ್ರಧಾನಿ ಮೋದಿ ಮೇಲಿನ ನಿಷ್ಠೆ
ಕಾಂಗ್ರೆಸ್ಗೆ ಮರಳಿ ಸೇರ್ಪಡೆಯಾಗುವ ವದಂತಿಗಳಿಗೆ ನಕ್ಕ ಅವರು, “ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್ ತೊರೆದು, ನೆಹರೂ ಅವರ ತಪ್ಪುಗಳಿಗೆ ಕ್ಷಮೆ ಯಾಚಿಸಿದರೆ ಮಾತ್ರ ನಾನು ಕಾಂಗ್ರೆಸ್ ಸೇರುತ್ತೇನೆ” ಎಂದು ಹೇಳಿದ್ದಾರೆ. ಜೊತೆಗೆ, ಪಕ್ಷದ ಹುದ್ದೆಯಿಂದ ನಿರ್ಗಮಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ದೇಶಸೇವೆಯ ಬದ್ಧತೆಗೆ ತಾವೆಂದೂ ಬೆಂಬಲವಾಗಿರುವುದಾಗಿ ಅವರು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ ; ಗಾಲೆ ಟೆಸ್ಟ್ನಲ್ಲಿ ಜಡೇಜಾ ಮಾಡಿದ ‘ನೋ-ಬಾಲ್’ ಯಡವಟ್ಟು : ಹತಾಶರಾದ ಕೋಚ್ ಗಂಭೀರ್



















