ಬೆಂಗಳೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯು ದೇಶದ ಬಡವರಿಗೆ ಉನ್ನತ ದರ್ಜೆಯ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವ ಮೂಲಕ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತಿದೆ. ದೇಶದ ಬಡವರು ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. ಇದಕ್ಕೆ ಆಯುಷ್ಮಾನ್ ಕಾರ್ಡ್ ಪ್ರಮುಖವಾಗಿದ್ದು, ಹೇಗೆ ಪಡೆಯಬೇಕು? ಯಾರು ಯೋಜನೆಗೆ ಅರ್ಹರು ಎಂಬುದರ ಮಾಹಿತಿ ಇಲ್ಲಿದೆ.
• ಯೋಜನೆಯ ಪ್ರಯೋಜನಗಳು
ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಾರ್ಷಿಕವಾಗಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಲಭ್ಯವಿದೆ. ಫಲಾನುಭವಿಗಳು ದೇಶದ ಯಾವುದೇ ನೋಂದಾಯಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ನಗದು ಪಾವತಿಸದೆ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಗೆ ದಾಖಲಾಗುವ ದಿನದಿಂದ ಹಿಡಿದು, ಚಿಕಿತ್ಸೆಯ ನಂತರದ 15 ದಿನಗಳವರೆಗಿನ ವೆಚ್ಚಗಳು (ಔಷಧಿ, ಚಿಕಿತ್ಸೆ, ಹಾಸಿಗೆ, ಇತ್ಯಾದಿ) ಇದರಲ್ಲಿ ಸೇರಿವೆ. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಮೂತ್ರಪಿಂಡ ಕಾಯಿಲೆಗಳು, ನರರೋಗಗಳು ಮುಂತಾದ ಗಂಭೀರ ಮತ್ತು ದುಬಾರಿ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು.
• ಆಯುಷ್ಮಾನ್ ಯೋಜನೆಗೆ ಯಾರೆಲ್ಲಾ ಅರ್ಹರು?
ಈ ಯೋಜನೆಯು ನಿರ್ದಿಷ್ಟ ಮಾನದಂಡಗಳನ್ನು ಆಧರಿಸಿದೆ. 2011ರ ಗಣತಿ ಡೇಟಾವನ್ನು ಮುಖ್ಯ ಮಾನದಂಡವಾಗಿ ಬಳಸಲಾಗುತ್ತದೆ. ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ವಾಸಿಸುವ ದಲಿತ ಅಥವಾ ಪರಿಶಿಷ್ಟ ಪಂಗಡದ ಕುಟುಂಬಗಳು. ಯಾವುದೇ ವಯಸ್ಕ ಪುರುಷ ಸದಸ್ಯರಿಲ್ಲದ ಕುಟುಂಬಗಳು. ವಿಶೇಷಚೇತನರು, ಭೂರಹಿತ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು ಅರ್ಹರು. ನಗರ ಪ್ರದೇಶಗಳಲ್ಲಿ ವಾಸಿಸುವ ರಸ್ತೆಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಅಲೆಮಾರಿಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ಪ್ಲಂಬರ್ಗಳು, ಎಲೆಕ್ಟ್ರಿಷಿಯನ್ ಗಳು, ಸೆಕ್ಯುರಿಟಿ ಗಾರ್ಡ್ ಗಳು ಯೋಜನೆಯ ಲಾಭ ಪಡೆಯಬಹುದು.
• ಆಯುಷ್ಮಾನ್ ಕಾರ್ಡ್ ಪಡೆಯೋದು ಹೇಗೆ?
• mera.pmjay.gov.in ವೆಬ್ ಸೈಟ್ ಗೆ ಭೇಟಿ ನೀಡಿ.
• ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಪರಿಶೀಲನೆಯನ್ನು ಪೂರ್ಣಗೊಳಿಸಿ.
• ನಿಮ್ಮ ಅರ್ಹತೆಯನ್ನು ಪರಿಶೀಲಿಸಿ. ನಿಮ್ಮ ಹೆಸರು ಅರ್ಹತಾ ಪಟ್ಟಿಯಲ್ಲಿದ್ದರೆ, ನೀವು ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
• ಅಗತ್ಯ ವಿವರಗಳನ್ನು ಭರ್ತಿ ಮಾಡಿ ಮತ್ತು ಆಧಾರ್ ಕಾರ್ಡ್ ಅಪ್ ಲೋಡ್ ಮಾಡಿ.
• ಅರ್ಜಿಯನ್ನು ಸಲ್ಲಿಸಿದ ನಂತರ, ನಿಮ್ಮ ಆಯುಷ್ಮಾನ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದು.
ಆಫ್ ಲೈನ್ ವಿಧಾನ
ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಿ. ಅಧಿಕಾರಿಗಳಿಗೆ ನಿಮ್ಮ ಅರ್ಹತೆಯ ಬಗ್ಗೆ ಮಾಹಿತಿ ನೀಡಿ. ಅವರು ನಿಮ್ಮ ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸಿ, ಆಯುಷ್ಮಾನ್ ಕಾರ್ಡ್ ನೀಡುತ್ತಾರೆ. ಯೋಜನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನೀವು ಆಯುಷ್ಮಾನ್ ಭಾರತ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು ಅಥವಾ 14555 ಅಥವಾ 1800-111-565 ಸಹಾಯವಾಣಿಗೆ ಕರೆ ಮಾಡಬಹುದು.
ಇದನ್ನೂ ಓದಿ ; “ಮನೆ ಬಾಡಿಗೆ ಕಟ್ಟುವುದು ಹೇಗೆ?” : ಬಿಜೆಪಿ ತೊರೆದ ಬಳಿಕ ಶೆಹಜಾದ್ ಪೂನಾವಾಲ ಮೊದಲ ಪ್ರತಿಕ್ರಿಯೆ!



















