ನವದೆಹಲಿ : ದೇಶದ ರಾಜಕಾರಣದಲ್ಲಿ ದಶಕಗಳಿಂದ ಕಷ್ಟಪಟ್ಟು ನೆಲೆ ನಿಂತಿರುವ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹುಟ್ಟಿಕೊಂಡ ಕೇವಲ 5 ದಿನದ ‘ಮೀಮ್’ ಬ್ರ್ಯಾಂಡ್‌ವೊಂದು ನಡುಕ ಹುಟ್ಟಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಜನ್ಮತಾಳಿದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ಡಿಜಿಟಲ್ ಆಂದೋಲನವು ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 1 ಕೋಟಿಗೂ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ಆಡಳಿತಾರೂಢ ಬಿಜೆಪಿಯ ಅಧಿಕೃತ ಖಾತೆಯನ್ನು ಹಿಂದಿಕ್ಕಿದೆ.
ಅಭಿಜೀತ್ ದೀಪ್ಕೆ ಎಂಬ ವ್ಯಕ್ತಿಯಿಂದ ಆರಂಭವಾದ ಈ ವ್ಯಂಗ್ಯಾತ್ಮಕ ಆಂದೋಲನವು ಕೇವಲ ಹಾಸ್ಯ, ರೀಲ್ಸ್ ಮತ್ತು ಯುವ ಸಮೂಹದ ಆಕ್ರೋಶದ ಆಧಾರದ ಮೇಲೆ ದೇಶದ ಅತ್ಯಂತ ಶಕ್ತಿಶಾಲಿ ರಾಜಕೀಯ ಪಕ್ಷಗಳಿಗೆ ಡಿಜಿಟಲ್ ಪೈಪೋಟಿ ನೀಡಲಾರಂಭಿಸಿದೆ. ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯ ಅಧಿಕೃತ ಖಾತೆಯು 8.7 ದಶಲಕ್ಷ ಫಾಲೋವರ್ಸ್ ಹೊಂದಿದ್ದರೆ, ಕಾಂಗ್ರೆಸ್ 13.2 ದಶಲಕ್ಷ ಫಾಲೋವರ್ಸ್ ಹೊಂದಿದೆ.

ಸಿಜೆಐ ‘ಜಿರಳೆ’ ಹೇಳಿಕೆಯಿಂದ ಸಿಡಿದ ಯುವಾಕ್ರೋಶ
ಈ ಅಭೂತಪೂರ್ವ ಆನ್‌ಲೈನ್ ಬಿರುಗಾಳಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಮೇ 15ರಂದು ನೀಡಿದ್ದ ಒಂದು ಹೇಳಿಕೆಯೇ ಪ್ರಮುಖ ಕಾರಣ. ವಿಚಾರಣೆಯೊಂದರ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಕುರಿತು ಮಾತನಾಡಿದ್ದ ಸಿಜೆಐ, “ಕೆಲವು ಯುವಕರಿದ್ದಾರೆ, ಅವರಿಗೆ ಯಾವುದೇ ಉದ್ಯೋಗವಿಲ್ಲ ಅಥವಾ ವೃತ್ತಿಯಲ್ಲಿ ಸ್ಥಾನವಿಲ್ಲ. ಅವರು ಜಿರಳೆಗಳಂತೆ (Cockroaches) ಮಾಧ್ಯಮ, ಸಾಮಾಜಿಕ ಜಾಲತಾಣ ಅಥವಾ ಆರ್‌ಟಿಐ ಕಾರ್ಯಕರ್ತರಾಗಿ ಬದಲಾಗಿ ಎಲ್ಲರ ಮೇಲೂ ದಾಳಿ ಮಾಡಲು ಪ್ರಾರಂಭಿಸುತ್ತಾರೆ, ವ್ಯವಸ್ಥೆಯನ್ನು ಪ್ರಶ್ನಿಸಲು ಶುರು ಮಾಡುತ್ತಾರೆ” ಎಂದು ಮಾರ್ಮಿಕವಾಗಿ ನುಡಿದಿದ್ದರು.
ಸಂವಿಧಾನದ ರಕ್ಷಕರಾಗಿರಬೇಕಾದವರೇ ಯುವಕರನ್ನು ಜಿರಳೆಗಳಿಗೆ ಹೋಲಿಸಿದ್ದು ದೇಶದ ಯುವ ಜನಾಂಗವನ್ನು ಕೆರಳಿಸಿತು. ಮರುದಿನವೇ ಸಿಜೆಐ ಅವರು, “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ನಾನು ನಕಲಿ ಪದವಿ ಪಡೆದು ವೃತ್ತಿ ಕಲುಷಿತಗೊಳಿಸುವ ಪರಾವಲಂಬಿಗಳನ್ನು ಉಲ್ಲೇಖಿಸಿದ್ದೇನೆಯೇ ಹೊರತು ದೇಶದ ಯುವಕರನ್ನಲ್ಲ” ಎಂದು ಸ್ಪಷ್ಟನೆ ನೀಡಿದರೂ ಆಕ್ರೋಶ ತಣ್ಣಗಾಗಲಿಲ್ಲ. ಇದರ ಫಲವಾಗಿ ಮೇ 16ರಂದು ಉದಯಿಸಿದ್ದೇ ‘ಕಾಕ್ರೋಚ್ ಜನತಾ ಪಾರ್ಟಿ’.
ಕೇವಲ 56 ಪೋಸ್ಟ್‌ಗಳ ಮೂಲಕ ದಾಖಲೆ ಬರೆದ ಜಿನ್ ಜಿ
ಬಿಜೆಪಿ ಜಗತ್ತಿನಾದ್ಯಂತ 14 ಕೋಟಿಗೂ ಹೆಚ್ಚು ಪ್ರಾಥಮಿಕ ಸದಸ್ಯರನ್ನು ಹೊಂದಿರುವ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಸಂಘಟನೆಯಾಗಿದೆ. ಅದು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 18,000ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಪ್ರಕಟಿಸಿದೆ. ಆದರೆ, ಕಾಕ್ರೋಚ್ ಜನತಾ ಪಾರ್ಟಿಯು ಕೇವಲ 56 ಪೋಸ್ಟ್‌ಗಳ ಮೂಲಕವೇ ಬಿಜೆಪಿಯ ಒಟ್ಟು ಫಾಲೋವರ್ಸ್ ಸಂಖ್ಯೆಯನ್ನು ದಾಟಿ ಮುನ್ನಡೆದಿದೆ. ಸಿಜೆಐ ಹೇಳಿಕೆಯಿಂದ ಆರಂಭವಾದ ಈ ಆಂದೋಲನವು, ದೇಶದಲ್ಲಿ ಕಾಡುತ್ತಿರುವ ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಯುವಕರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥೆಯ ವಿರುದ್ಧದ ದೊಡ್ಡ ಆಕ್ರೋಶದ ವೇದಿಕೆಯಾಗಿ ರೂಪಾಂತರಗೊಂಡಿದೆ. “ಯುವಶಕ್ತಿಯನ್ನು ಕಡೆಗಣಿಸಬೇಡಿ” ಎಂದು ಸಿಜೆಪಿ ತನ್ನ ಖಾತೆಯಲ್ಲಿ ಬರೆದುಕೊಂಡಿದೆ. ಕೇವಲ ಮೂರೇ ದಿನಗಳಲ್ಲಿ ಸಿಜೆಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಯುವಕರು ನೋಂದಾಯಿಸಿಕೊಂಡಿರುವುದು ಇದು ಕೇವಲ ತಾತ್ಕಾಲಿಕ ಟ್ರೆಂಡ್ ಅಲ್ಲ, ಬದಲಿಗೆ ವ್ಯವಸ್ಥೆಯ ವಿರುದ್ಧದ ತೀವ್ರ ಅಸಮಾಧಾನ ಎಂಬುದನ್ನು ಸಾಬೀತುಪಡಿಸಿದೆ.
ಸಿಜೆಪಿ ಸೇರಲು ರಾಜಕಾರಣಿಗಳ ಉತ್ಸುಕತೆ: ಸ್ಥಾಪಕರ ನಿರಾಕರಣೆ
ಈ ಅಭಿಯಾನದ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ದೇಶದ ಪ್ರಮುಖ ರಾಜಕೀಯ ಮುಖಂಡರು ಮತ್ತು ಪ್ರಭಾವಿಗಳು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ತೃಣಮೂಲ ಕಾಂಗ್ರೆಸ್ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಅವರು ಕೂಡ ಕಾಕ್ರೋಚ್ ಜನತಾ ಪಾರ್ಟಿ ಸೇರಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಉತ್ತರಾಖಂಡದಂತಹ ರಾಜ್ಯಗಳಲ್ಲಿ ಸಿಜೆಪಿಯ ಅನಧಿಕೃತ ರಾಜ್ಯ ಘಟಕಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿವೆ.
ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಸಂಸ್ಥಾಪಕ ಅಭಿಜೀತ್ ದೀಪ್ಕೆ, “ಇದು ಸಂಪೂರ್ಣವಾಗಿ ಯುವಕರಿಗಾಗಿ ಇರುವ ವೇದಿಕೆ. ಪ್ರಸ್ತುತ ವ್ಯವಸ್ಥೆಯಲ್ಲಿರುವ ರಾಜಕಾರಣಿಗಳು ಈ ಪಕ್ಷಕ್ಕೆ ಸೇರ್ಪಡೆಯಾಗುವುದನ್ನು ಯುವ ಜನಾಂಗ ಇಷ್ಟಪಡುವುದಿಲ್ಲ. ನಾವು ಯಾವುದೇ ಸಾಂಪ್ರದಾಯಿಕ ರಾಜಕೀಯ ಮುಖಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣಾ ರಾಜಕೀಯ ಅಥವಾ ಸದಸ್ಯತ್ವದ ದೃಷ್ಟಿಯಿಂದ ಇದು ಇನ್ನೂ ಸಾಂಪ್ರದಾಯಿಕ ಪಕ್ಷಗಳಿಗೆ ಪರ್ಯಾಯವಲ್ಲದಿದ್ದರೂ, ಡಿಜಿಟಲ್ ಜಗತ್ತಿನಲ್ಲಿ ಯುವ ಸಮೂಹದ ರಾಜಕೀಯ ಪ್ರಜ್ಞೆಯನ್ನು ಎಚ್ಚರಿಸುವಲ್ಲಿ ಈ ‘ಜಿರಳೆ’ ಯಶಸ್ವಿಯಾಗಿದೆ.
ಇದನ್ನೂ ಓದಿ : ನೀವು ಈ ತಪ್ಪು ಮಾಡಿದ್ದರೆ ಬ್ಯಾಂಕ್ ಖಾತೆಯೇ ಸ್ಥಗಿತ : ಮೊದಲು ಪರಿಶೀಲನೆ ಮಾಡಿಕೊಳ್ಳಿ!



















