ಬೆಂಗಳೂರು : ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಸಿದ್ದ ಹೈಡ್ರಾಮಾ ಸುಖಾಂತ್ಯ ಕಂಡಿದೆ. ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.
ಟಿ.ಸಿ. ಪಾಳ್ಯದ ವಾರಾಣಸಿ ಮುಖ್ಯ ರಸ್ತೆಯ ನಿವಾಸಿ ಮನೋಹರ್ ಆಚಾರ್ ಅವರ ಪುತ್ರಿ ಬಿಶಾಕ (16) ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ ಎಂದು ಗುರುತಿಸಲಾಗಿದೆ. ರಾಮಮೂರ್ತಿನಗರದ ಎನ್.ಆರ್.ಐ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ 5ನೇ ಮಹಡಿಗೆ ಹತ್ತಿದ ಬಾಲಕಿ, “ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಜೋರಾಗಿ ಕೂಗಾಡಿದ್ದಾಳೆ.
ಬಾಲಕಿಯ ಕಿರುಚಾಟ ಕೇಳಿ ಸ್ಥಳದಲ್ಲಿದ್ದ ಸಾರ್ವಜನಿಕರು ಆತಂಕಗೊಂಡಿದ್ದು, ತಕ್ಷಣವೇ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆಯೇ ರಾಮಮೂರ್ತಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರ ಸಹಾಯದೊಂದಿಗೆ ಬಾಲಕಿಯನ್ನು ಸುರಕ್ಷಿತವಾಗಿ ಕೆಳಗಿಳಿಸಿ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ. ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರ ಸಮಯಪ್ರಜ್ಞೆ ಮತ್ತು ಸೂಕ್ತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ.
ರಕ್ಷಣೆ ಬಳಿಕ ಬಾಲಕಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆ ಹಾಗೂ ಕೌನ್ಸಿಲಿಂಗ್‌ಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕೇವಲ 5 ದಿನದಲ್ಲಿ 1 ಕೋಟಿ ಫಾಲೋವರ್ಸ್ : ಇನ್‌ಸ್ಟಾದಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ‘ಕಾಕ್ರೋಚ್ ಜನತಾ ಪಾರ್ಟಿ’!


















