ಹೈದರಾಬಾದ್ ; ಆನ್‌ಲೈನ್ ಜೂಜಾಟದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ 21 ವರ್ಷದ ವಿದ್ಯಾರ್ಥಿಯೊಬ್ಬ, ಸಾಲ ತೀರಿಸಲು ಮಹಿಳೆಯೊಬ್ಬಳನ್ನು ದರೋಡೆ ಮಾಡಿ, ಸಾಕ್ಷಿ ನಾಶಪಡಿಸಲು ಅವಳನ್ನು ಆಳವಾದ ಬಾವಿಗೆ ತಳ್ಳಿರುವಂಥ ಆಘಾತಕಾರಿ ಘಟನೆ ತೆಲಂಗಾಣದ ಕರೀಮನಗರ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಬಾವಿಗೆ ಬಿದ್ದ 55 ವರ್ಷದ ತಂಗರಾಳ ಲಕ್ಷ್ಮಿ ಎಂಬ ಮಹಿಳೆ ಸುಮಾರು 21 ಗಂಟೆಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ.
ಕೆಲಸದ ಆಮಿಷ ಒಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಪಾಪಿ
ಜುಲೈ 1 ರಂದು ದಿನಗೂಲಿ ನೌಕರರಾದ ಲಕ್ಷ್ಮಿ ಅವರು ಕೆಲಸ ಮುಗಿಸಿ ಮನೆಗೆ ಮರಳದೇ ಇದ್ದಾಗ, ಆತಂಕಗೊಂಡ ಅವರ ಮಗ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಆರಂಭದಲ್ಲಿ ಇದು ಸಾಮಾನ್ಯ ನಾಪತ್ತೆ ಪ್ರಕರಣವೆಂದೇ ಭಾವಿಸಲಾಗಿತ್ತು. ಆದರೆ ಮರುದಿನ ಬೆಳಗ್ಗೆ ನುಸ್ತುಲಾಪುರ ಗ್ರಾಮದ ಹೊರವಲಯದ ಬಾವಿಯೊಂದರಿಂದ ಗ್ರಾಮಸ್ಥರು ಮಹಿಳೆಯನ್ನು ರಕ್ಷಿಸಿದಾಗ ಅಸಲಿ ಕಥೆ ಅನಾವರಣಗೊಂಡಿದೆ.

ಬದುಕುಳಿದ ಲಕ್ಷ್ಮಿ ಪೊಲೀಸರಿಗೆ ತಮಗಾದ ಸ್ಥಿತಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಅಪರಿಚಿತ ಯುವಕನೊಬ್ಬ ತೋಟದಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ಆಕೆಯನ್ನು ಮೊದಲು ರ‍್ಯಾಪಿಡೋ ಬೈಕ್ ಮೂಲಕ ತಿಮ್ಮಾಪುರ ಗ್ರಾಮಕ್ಕೆ ಕರೆದೊಯ್ದಿದ್ದ. ಆದರೆ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾರ್ವಜನಿಕರ ಓಡಾಟ ಹೆಚ್ಚಾಗಿದ್ದರಿಂದ, ಯಾರೂ ಇಲ್ಲದ ನಿರ್ಜನ ಪ್ರದೇಶದತ್ತ ಕರೆದೊಯ್ಯಲು ಆಕೆಯನ್ನು ತನ್ನ ಸ್ವಂತ ಮೋಟಾರ್ ಸೈಕಲ್‌ಗೆ ಹತ್ತಿಸಿಕೊಂಡು ನುಸ್ತುಲಾಪುರದ ಕಡೆಗೆ ಕರೆತಂದಿದ್ದ. ನಿರ್ಜನ ರಸ್ತೆಗೆ ಬರುತ್ತಿದ್ದಂತೆ ಆಕೆಗೆ ಬೆದರಿಕೆ ಹಾಕಿ, ಆಕೆಯ ಬಳಿಯಿದ್ದ 5 ಗ್ರಾಂ ಚಿನ್ನದ ಆಭರಣಗಳು, 20 ಗ್ರಾಂ ಬೆಳ್ಳಿ ಕಾಲುಗೆಜ್ಜೆ ಮತ್ತು ನಗದನ್ನು ದೋಚಿದ್ದ.
ಬಾವಿಗೆ ತಳ್ಳಿ ಹಗ್ಗವನ್ನೂ ಕತ್ತರಿಸಿದ ಕಿರಾತಕ
ದರೋಡೆಯ ನಂತರ ಮಹಿಳೆ ತನ್ನನ್ನು ಗುರುತಿಸಬಾರದು ಎಂಬ ಏಕೈಕ ಉದ್ದೇಶದಿಂದ ಆರೋಪಿ ಆಕೆಯನ್ನು ಕೃಷಿ ಬಾವಿಯೊಂದಕ್ಕೆ ತಳ್ಳಿದ್ದ. ಬಾವಿಗೆ ಬಿದ್ದ ತಕ್ಷಣ ಲಕ್ಷ್ಮಿ ಅವರು ಅಲ್ಲಿದ್ದ ಹಗ್ಗವೊಂದನ್ನು ಹಿಡಿದು ನೀರಿನಲ್ಲಿ ಮುಳುಗದಂತೆ ಮೇಲೇಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಆ ಯುವಕ, ಆಕೆ ಹೇಗಾದರೂ ಮಾಡಿ ಸಾಯಲೇಬೇಕು ಎಂಬ ದೃಢ ನಿರ್ಧಾರದಿಂದ ಆ ಹಗ್ಗವನ್ನೂ ಕತ್ತರಿಸಿದ್ದಾನೆ ಎಂದು ಕರೀಮನಗರ ಪೊಲೀಸ್ ಕಮಿಷನರ್ ಗೌಸ್ ಆಲಂ ತಿಳಿಸಿದ್ದಾರೆ.
ಆದಾಗ್ಯೂ ಧೈರ್ಯ ಕಳೆದುಕೊಳ್ಳದ ಲಕ್ಷ್ಮಿ ಅವರಿಗೆ ಈಜಲು ಬರುತ್ತಿದ್ದರಿಂದ, ಬಾವಿಯಲ್ಲಿದ್ದ ಮೋಟರ್ ಪೈಪ್‌ಲೈನ್‌ಗೆ ಜೋಡಿಸಲಾಗಿದ್ದ ಮತ್ತೊಂದು ಕೇಬಲ್ ವೈರ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಇಡೀ ರಾತ್ರಿ ನೀರಿನಲ್ಲೇ ಕಳೆದಿದ್ದಾರೆ. ಆ ಪ್ರದೇಶವು ಸಂಪೂರ್ಣ ನಿರ್ಜನವಾಗಿದ್ದರಿಂದ ಆಕೆಯ ಕಿರುಚಾಟ ಯಾರಿಗೂ ಕೇಳಿಸಿರಲಿಲ್ಲ. ಮರುದಿನ ಬೆಳಗ್ಗೆ ಸ್ಥಳೀಯ ರೈತರು ಬಾವಿಯ ಬಳಿ ಬಂದಾಗ ಆಕೆಯ ಕೂಗು ಕೇಳಿ ತಕ್ಷಣವೇ ಆಕೆಯನ್ನು ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.
ಆರೋಪಿಗಳ ಬಂಧನ
ಮಹಿಳೆಯ ರಕ್ಷಣೆಯ ಬೆನ್ನಲ್ಲೇ ರ‍್ಯಾಪಿಡೋ ಬುಕಿಂಗ್ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ಫೋನ್ ನೆಟ್‌ವರ್ಕ್ ಆಧರಿಸಿ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಧಮ್ಮಾ ದಿನೇಶ್ ರೆಡ್ಡಿ (21) ಎಂಬಾತನನ್ನು ಬಂಧಿಸಿದೆ. ವಿಚಾರಣೆ ವೇಳೆ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ದಿನೇಶ್ ರೆಡ್ಡಿ ಆನ್‌ಲೈನ್ ಜೂಜು, ಬೆಟ್ಟಿಂಗ್ ಆ್ಯಪ್‌ಗಳು ಹಾಗೂ ವಿವಿಧ ಸಾಲದ ಆ್ಯಪ್‌ಗಳ ಮೂಲಕ ಸುಮಾರು 4 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ದೋಚಿದ ಚಿನ್ನವನ್ನು ಖರೀದಿಸಿದ ಜ್ಯುವೆಲ್ಲರಿ ವ್ಯಾಪಾರಿಯನ್ನೂ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ : ರಾಮಮಂದಿರಕ್ಕೆ ನೀಡಿದ್ದ 5 ಕೋಟಿ ರೂ.ಗಳ ಚಿನ್ನದ ರಾಮಚರಿತಮಾನಸವೂ ನಾಪತ್ತೆ?



















