ನವದೆಹಲಿ : ಭಾರತೀಯ ಸೇನಾಪಡೆಗಳಿಗೆ ಇದೀಗ ಹೊಸ ಸಾರಥಿಗಳನ್ನು ನೇಮಕ ಮಾಡಲಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯ ಅತ್ಯುನ್ನತ ಹುದ್ದೆಯಾದ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ನಿವೃತ್ತ ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಇನ್ನು ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರನ್ನಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ನೇಮಿಸಲಾಗಿದೆ. ಹಾಲಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿಯು ಇದೇ ಮೇ 30ರಂದು ಮುಕ್ತಾಯಗೊಳ್ಳಲಿದ್ದು, ತೆರವಾಗುವ ಆ ಹುದ್ದೆಯನ್ನು ರಾಜಾ ಸುಬ್ರಮಣಿ ಅವರು ಅಲಂಕರಿಸಲಿದ್ದಾರೆ.
ಸದ್ಯ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ (ಎನ್‌ಎಸ್‌ಸಿಎಸ್) ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಸುಬ್ರಮಣಿ ಅವರು, ಅಧಿಕಾರ ವಹಿಸಿಕೊಂಡ ದಿನದಿಂದಲೇ ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ವರ್ಷ ಜುಲೈ 31ರಂದು ಸೇನಾ ಉಪಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾಗಿದ್ದ ಇವರು, ಭಾರತೀಯ ಸೇನೆಯಲ್ಲಿ ಸುಮಾರು ನಾಲ್ಕು ದಶಕಗಳ (39 ವರ್ಷ) ಸುದೀರ್ಘ ಹಾಗೂ ಸ್ತುತ್ಯರ್ಹ ಸೇವೆ ಸಲ್ಲಿಸಿದ್ದಾರೆ.
1985ರ ಡಿಸೆಂಬರ್ 14ರಂದು ಗರ್ವಾಲ್ ರೈಫಲ್ಸ್‌ನ 8ನೇ ಬೆಟಾಲಿಯನ್ ಮೂಲಕ ಸೇವೆಗೆ ಸೇರ್ಪಡೆಗೊಂಡ ಇವರು, ಅಸ್ಸಾಂನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಕೇಂದ್ರ ವಲಯದ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಪ್ರಮುಖ ವಿಭಾಗಗಳನ್ನು ಮುನ್ನಡೆಸಿದ್ದಾರೆ. ಪಶ್ಚಿಮ ಮುಂಚೂಣಿಯಲ್ಲಿ ಭಾರತೀಯ ಸೇನೆಯ ಪ್ರಮುಖ ‘ಸ್ಟ್ರೈಕ್ ಕಾರ್ಪ್ಸ್’ ಆದ 2ನೇ ಕಾರ್ಪ್ಸ್ ಅನ್ನು ಮುನ್ನಡೆಸಿದ ಹೆಗ್ಗಳಿಕೆಯೂ ಇವರದ್ದಾಗಿದೆ. ಇವರ ಅಪ್ರತಿಮ ಸೇವೆಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಹಾಗೂ ವಿಶಿಷ್ಟ ಸೇವಾ ಪದಕಗಳು ಒಲಿದು ಬಂದಿವೆ.
ನೌಕಾಪಡೆಗೆ ಕೃಷ್ಣ ಸ್ವಾಮಿನಾಥನ್ ಸಾರಥ್ಯ
ಮತ್ತೊಂದು ಪ್ರಮುಖ ನೇಮಕಾತಿಯಲ್ಲಿ, ಹಾಲಿ ಪಶ್ಚಿಮ ನೌಕಾ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿರುವ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ನೌಕಾಪಡೆ ಮುಖ್ಯಸ್ಥರಾಗಿರುವ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಅವರು ಮೇ 31ರಂದು ನಿವೃತ್ತರಾಗಲಿದ್ದು, ಅಂದೇ ಕೃಷ್ಣ ಸ್ವಾಮಿನಾಥನ್ ಅವರು ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
1987ರ ಜುಲೈ 1ರಂದು ನೌಕಾಪಡೆಗೆ ಸೇರ್ಪಡೆಗೊಂಡ ಇವರು, ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧತಂತ್ರದಲ್ಲಿ ಅಪಾರ ಪರಿಣತಿ ಹೊಂದಿದ್ದಾರೆ. ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ, ಐಎನ್‌ಎಸ್ ಮೈಸೂರು, ಐಎನ್‌ಎಸ್ ಕುಲೀಶ್ ಹಾಗೂ ಕ್ಷಿಪಣಿ ನೌಕೆಗಳಾದ ಐಎನ್‌ಎಸ್ ವಿದ್ಯುತ್ ಮತ್ತು ಐಎನ್‌ಎಸ್ ವಿನಾಶ್ ನೌಕೆಗಳ ಕಮಾಂಡರ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪುಣೆಯ ಖಡಕ್ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮಾತ್ರವಲ್ಲದೆ, ಬ್ರಿಟನ್ ಹಾಗೂ ಅಮೆರಿಕದ ಪ್ರತಿಷ್ಠಿತ ನೌಕಾ ಯುದ್ಧ ಕಾಲೇಜುಗಳಲ್ಲಿಯೂ ತರಬೇತಿ ಪಡೆದ ವ್ಯಾಪಕ ಅನುಭವ ಇವರ ಬೆನ್ನಿಗಿದೆ.
ಇದನ್ನೂ ಓದಿ : ತಮಿಳುನಾಡಲ್ಲಿ ಮುಂದುವರಿದ ಪೊಲಿಟಿಕಲ್ ಥ್ರಿಲ್ಲರ್ : ದಳಪತಿ ವಿಜಯ್ ‘ಸಿಎಂ’ ಕನಸಿಗೆ ವಿಸಿಕೆ ಅಡ್ಡಿ!



















