ಚೆನ್ನೈ : ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಜ್ಯ ಗೀತೆಯಾದ ‘ತಮಿಳು ತಾಯಿ ವಾಝ್ತು’ ಹಾಡಿಗೆ ಮೊದಲ ಆದ್ಯತೆ ನೀಡಬೇಕು ಎಂಬ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಸರ್ಕಾರಿ ಸಮಾರಂಭಗಳಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ಅನ್ನು ಮೊದಲು ಹಾಡಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ನಿರ್ಣಯದ ಮೂಲಕ ಸಡ್ಡು ಹೊಡೆದಿದ್ದಾರೆ.
ವಿಧಾನಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ವಿಜಯ್ ಅವರೇ ಈ ಪ್ರಸ್ತಾವನೆಯನ್ನು ಮಂಡಿಸಿದರು. ಭಾವುಕವಾಗಿ ಮಾತನಾಡಿದ ಅವರು, “ತಮಿಳು ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಜೀವನಾಡಿ ಮತ್ತು ಭಾವನೆ. ಮಾತೃಭಾಷೆಯು ತಾಯ್ತನದಷ್ಟೇ ಪವಿತ್ರವಾದದ್ದು. ತಮಿಳು ಎಂದರೆ ಹೆಮ್ಮೆ, ತಮಿಳು ಎಂದರೆ ಶಕ್ತಿ. ‘ತಮಿಳು’ ಎಂದ ತಕ್ಷಣ ಇಡೀ ತಮಿಳುನಾಡು ಒಂದಾಗಿ ನಿಲ್ಲುತ್ತದೆ. ರಾಜ್ಯದಲ್ಲಿ ‘ತಮಿಳು ತಾಯಿ ವಾಝ್ತು’ ಗೀತೆಗೆ ಪ್ರಥಮ ಸ್ಥಾನ ಸಿಗುವಂತೆ ನೋಡಿಕೊಳ್ಳುವುದು ನಮ್ಮ ಹಕ್ಕು. ಈ ನಿರ್ಣಯಕ್ಕೆ ಆಡಳಿತಾರೂಢ ಡಿಎಂಕೆ ಮತ್ತು ವಿರೋಧ ಪಕ್ಷವಾದ ಎಐಎಡಿಎಂಕೆ ಸೇರಿದಂತೆ ಎಲ್ಲಾ ಪಕ್ಷಗಳು ಬೆಂಬಲ ಸೂಚಿಸಿದವು. ತದನಂತರ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಗಿದೆ ಮತ್ತು ಇದರ ಜಾರಿಗೆ ಇನ್ನು ಯಾವುದೇ ಅನುಮತಿಯ ಅಗತ್ಯವಿಲ್ಲ ಎಂದು ಘೋಷಿಸಿದರು.
ಕೇಂದ್ರದ ಸುತ್ತೋಲೆಯಿಂದ ಸೃಷ್ಟಿಯಾದ ವಿವಾದ
ಕೇಂದ್ರ ಗೃಹ ಸಚಿವಾಲಯವು ಕಳೆದ ಜನವರಿಯಲ್ಲಿ ನೀಡಿದ್ದ ನಿರ್ದೇಶನದಲ್ಲಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಮೊದಲು ಹಾಗೂ ಆ ನಂತರ ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ತಿಳಿಸಿತ್ತು. ಬಳಿಕ ಜುಲೈ 9 ರಂದು ನೀಡಿದ ಮತ್ತೊಂದು ಸುತ್ತೋಲೆಯಲ್ಲಿ, ರಾಜ್ಯ ಗೀತೆಯನ್ನು ಹಾಡುವಾಗಲೂ ‘ವಂದೇ ಮಾತರಂ’ ಅನ್ನು ಮೊದಲೇ ಹಾಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಗಿತ್ತು. ಆದರೆ, ತಮಿಳುನಾಡಿನಲ್ಲಿ 1970 ರಿಂದಲೇ ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ರಾಜ್ಯ ಗೀತೆಯನ್ನು ಹಾಡುವ ಪರಂಪರೆ ಬೆಳೆದುಬಂದಿದ್ದು, 2021ರಲ್ಲಿ ಅದನ್ನು ಅಧಿಕೃತ ರಾಜ್ಯ ಗೀತೆ ಎಂದು ಘೋಷಿಸಲಾಗಿತ್ತು. ಮೇ ತಿಂಗಳಿನಲ್ಲಿ ವಿಶ್ವವಿದ್ಯಾನಿಲಯವೊಂದರ ಕಾರ್ಯಕ್ರಮದಲ್ಲಿ ರಾಜ್ಯ ಗೀತೆಯನ್ನು ಮೂರನೆಯದಾಗಿ ಹಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ಜಾರಿ
ಈ ನೂತನ ನಿರ್ಣಯದ ಪ್ರಕಾರ, ತಮಿಳುನಾಡಿನ ಎಲ್ಲಾ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ನಡೆಯುವ ಯಾವುದೇ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ‘ತಮಿಳು ತಾಯಿ ವಾಝ್ತು’ ಗೀತೆಯನ್ನು ಮೊದಲು ಹಾಡುವುದು ಕಡ್ಡಾಯವಾಗಿದೆ. ಇತ್ತೀಚೆಗೆ ತಮಿಳುನಾಡಿನ 21 ಸಂಸದರು ರಾಜ್ಯಪಾಲರಿಗೆ ಪತ್ರ ಬರೆದು ಕಾರ್ಯಕ್ರಮಗಳ ಆರಂಭದಲ್ಲಿ ರಾಜ್ಯ ಗೀತೆ ಮತ್ತು ಮುಕ್ತಾಯದಲ್ಲಿ ರಾಷ್ಟ್ರಗೀತೆ ಹಾಡಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.
ಇದನ್ನೂ ಓದಿ : ‘ಶುದ್ಧ ಪೆಟ್ರೋಲ್ ನಿಮ್ಮಪ್ಪನ ಮನೆಯಿಂದ ಬರುತ್ತಾ?’ : ವಿವಾದ ಸೃಷ್ಟಿಸಿದ ಬಿಜೆಪಿ ಸಂಸದನ ಹೇಳಿಕೆ!



















