ಬೆಂಗಳೂರು : ಪಿ.ಸಿ. ಶೇಖರ್ ನಿರ್ದೇಶನದಲ್ಲಿ, ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದೂರು ನಿರ್ಮಿಸುತ್ತಿರುವ ‘ಮಹಾನ್’ ಚಿತ್ರ ಆರಂಭದಿಂದಲೂ ಕುತೂಹಲ ಮೂಡಿಸಿದೆ. ವಿಜಯ ರಾಘವೇಂದ್ರ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಹಲವು ಹಿರಿಯ ಹಾಗೂ ಅನುಭವಿ ಕಲಾವಿದರು ತಾರಾಬಳಗದಲ್ಲಿರುವುದು ಚಿತ್ರದ ವಿಶೇಷ.
‘ಮಹಾನ್’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಹಾಗೂ ‘ಹಾಗೆ ಸುಮ್ಮನೆ’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿರುವ ಕಿರಣ್ ಶ್ರೀನಿವಾಸ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರತಂಡ ಇಬ್ಬರ ಫಸ್ಟ್ ಲುಕ್‌ಗಳನ್ನು ಬಿಡುಗಡೆ ಮಾಡಿದ್ದು, ವಿಭಿನ್ನ ಪಾತ್ರಗಳಲ್ಲಿ ಇಬ್ಬರೂ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಚಿತ್ರದಲ್ಲಿ ತಾವು ವಿದ್ಯಾವಂತ ಹೆಣ್ಣುಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಮ್ರತಾ ಗೌಡ ತಿಳಿಸಿದ್ದಾರೆ. ನಗರದಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಹಳ್ಳಿಗೆ ಬರುವ ಯುವತಿ, ಅಲ್ಲಿನ ರೈತರ ಕಷ್ಟಗಳಿಗೆ ಧ್ವನಿಯಾಗುವ ಪಾತ್ರ ತಮ್ಮದು ಎಂದು ಹೇಳಿದ್ದಾರೆ. ಪಿ.ಸಿ. ಶೇಖರ್ ನಿರ್ದೇಶನದಲ್ಲಿ ನಟಿಸುವುದು ಬಹುದಿನಗಳ ಆಸೆಯಾಗಿತ್ತು. ‘ಮಹಾನ್’ ಚಿತ್ರದ ಮೂಲಕ ಅದು ಈಡೇರಿದ್ದು, ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ ಸೇರಿದಂತೆ ಹಲವು ಹಿರಿಯ ಕಲಾವಿದರೊಂದಿಗೆ ನಟಿಸಿರುವುದು ಸಂತಸ ತಂದಿದೆ ಎಂದು ನಮ್ರತಾ ಹೇಳಿದ್ದಾರೆ.
ಇನ್ನು ಕಿರಣ್ ಶ್ರೀನಿವಾಸ್ ಕೂಡ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಹಳ್ಳಿಯಿಂದ ನಗರಕ್ಕೆ ಬಂದು ವಿದ್ಯಾಭ್ಯಾಸ ಮಾಡಿದ ಯುವಕನಿಗೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಹಂಬಲವಿರುತ್ತದೆ. ಆದರೆ ಆತ ಮತ್ತೆ ಹಳ್ಳಿಗೆ ಬಂದು ಏನು ಮಾಡುತ್ತಾನೆ ಎಂಬುದು ತಮ್ಮ ಪಾತ್ರದ ಕಥೆಯ ಪ್ರಮುಖ ಅಂಶ ಎಂದು ಕಿರಣ್ ತಿಳಿಸಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರದಲ್ಲಿ ನಟಿಸಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ನಮ್ರತಾ ಗೌಡ ಹಾಗೂ ಕಿರಣ್ ಶ್ರೀನಿವಾಸ್ ಈವರೆಗೆ ಮಾಡಿರದ ರೀತಿಯ ಪಾತ್ರಗಳಲ್ಲಿ ‘ಮಹಾನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕ ಪಿ.ಸಿ. ಶೇಖರ್ ತಿಳಿಸಿದ್ದಾರೆ. ಕನ್ನಡದ ‘ಮಹಾನ್’ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಸಂತಸ ತಂದಿದೆ. ಚಿತ್ರದಲ್ಲಿ ರೈತರ ಬದುಕು ಹಾಗೂ ಸಮಾಜಕ್ಕೆ ಅಗತ್ಯವಾದ ಉತ್ತಮ ಸಂದೇಶವನ್ನು ಕಥೆಯ ಮೂಲಕ ಹೇಳಲಾಗುತ್ತಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
‘ಮಹಾನ್’ ತಮ್ಮ ಆಕಾಶ ಪಿಕ್ಚರ್ಸ್ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರವಾಗಿದ್ದು, ಅದ್ದೂರಿ ತಾರಾಬಳಗ ಮತ್ತು ತಾಂತ್ರಿಕ ವರ್ಗವನ್ನು ಹೊಂದಿದೆ ಎಂದು ನಿರ್ಮಾಪಕ ಪ್ರಕಾಶ್ ಬುದೂರು ತಿಳಿಸಿದ್ದಾರೆ. ವಿಜಯ ರಾಘವೇಂದ್ರ ನಾಯಕನಾಗಿ, ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಹಲವು ಅನುಭವಿ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ನಮ್ರತಾ ಗೌಡ ಮತ್ತು ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
ಇದನ್ನೂ ಓದಿ : ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಸ್ಫೋಟ ; ಸಿದ್ದರಾಮಯ್ಯ ಮೌನಕ್ಕೆ ಜಾರಿದ್ಯಾಕೆ?


















