ರಾಂಚಿ : ನೇಮಕಾತಿ ಪರೀಕ್ಷೆಗಳಲ್ಲಿ ಸತತವಾಗಿ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಇಂದು ಉಗ್ರ ರೂಪ ತಾಳಿದೆ. ಸಾವಿರಾರು ವಿದ್ಯಾರ್ಥಿಗಳು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಜಾರ್ಖಂಡ್ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಅವರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.

ನೇಮಕಾತಿ ಪರೀಕ್ಷೆಗಳಲ್ಲಿ ಸುಧಾರಣೆ ತರಬೇಕೆಂದು ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ರೈಲು, ಬಸ್ಸು ಹಾಗೂ ಖಾಸಗಿ ವಾಹನಗಳ ಮೂಲಕ ಬೆಳಿಗ್ಗೆಯೇ ರಾಂಚಿಗೆ ಆಗಮಿಸಿದ್ದರು. ವಿಧಾನಸೌಧದ ಕಡೆಗೆ ಜಾಥಾ ನಡೆಸಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಪ್ರಮುಖ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಆದರೆ ಉದ್ವಿಗ್ನಗೊಂಡ ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗಿದರು. ಈ ವೇಳೆ ಪೊಲೀಸರು ಜಲಫಿರಂಗಿ ಬಳಸಿ ನೀರನ್ನು ಎರಚಿದಾಗ, ವಿದ್ಯಾರ್ಥಿಗಳು ಅದಕ್ಕೆ ಹೆದರದೆ ಕುಣಿದು ಕುಪ್ಪಳಿಸಿ ವಿನೂತನವಾಗಿ ಪ್ರತಿಭಟನೆ ದಾಖಲಿಸಿದರು.
16 ದಿನಗಳಿಂದ ಸತತ ಹೋರಾಟ
ಜಾರ್ಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (JPSC) ಮತ್ತು ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್ (JSSC) ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ವ್ಯಾಪಕ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ನಡೆದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಮುಖ್ಯ ಕಾರಣ. ಇದನ್ನು ಖಂಡಿಸಿ ಕಳೆದ 16 ದಿನಗಳಿಂದ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದು, ಸರ್ಕಾರದೊಂದಿಗೆ ನಡೆದ ಆರನೇ ಹಂತದ ಮಾತುಕತೆಯೂ ವಿಫಲವಾಗಿದೆ.
ಸರ್ಕಾರವು ಶೇ.98ರಷ್ಟು ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿ, 3 ಪರೀಕ್ಷೆಗಳನ್ನು ರದ್ದುಗೊಳಿಸಲು ಒಪ್ಪಿಕೊಂಡಿದೆ. ಆದರೆ ವಿದ್ಯಾರ್ಥಿಗಳು ಎಲ್ಲಾ 13 ರದ್ದುಪಡಿಸಬೇಕಾದ ಪರೀಕ್ಷೆಗಳ ಪಟ್ಟಿ ನೀಡಿ, ಇಡೀ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪ್ರಸ್ತುತ ಆರು ವಿದ್ಯಾರ್ಥಿಗಳು ಸರಣಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಪರಿಸ್ಥಿತಿ ಕೈಮೀರದಂತೆ ತಡೆಯಲು ನಗರದಾದ್ಯಂತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ರಾಜಧಾನಿಗೆ ತಲುಪುವ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಗಡಿಭಾಗದ ಹೆದ್ದಾರಿಗಳಲ್ಲಿ ವಾಹನಗಳನ್ನು ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದರು. ಇನ್ನೊಂದೆಡೆ, ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅಧಿಕೃತ ನಿವಾಸದ ಹೊರಗೆ ಬಿಜೆಪಿ ನಾಯಕರು ಧರಣಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ನಡುವೆ, ಸಿಐಡಿ (CID) ಸಮನ್ಸ್ ಬೆನ್ನಲ್ಲೇ ಜೆಪಿಎಸ್‌ಸಿಯ ಮೂವರು ಸದಸ್ಯರು ಭಾನುವಾರ ರಾಜೀನಾಮೆ ನೀಡಿದ್ದು, ಸಂಸ್ಥೆಯ ಅಧ್ಯಕ್ಷ ಎಲ್. ಖಿಯಾಂಗ್ತೆ ಅವರು ಜುಲೈ 22 ರಂದೇ ರಾಜೀನಾಮೆ ನೀಡಿದ್ದರು. ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಸೊರೇನ್ ಭರವಸೆ ನೀಡಿದ್ದರೂ, ಸಿಬಿಐ ತನಿಖೆಯಾಗುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿ ನಾಯಕ ರವೀಂದ್ರ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಸಖ್ಯಕ್ಕೆ ಮೂವರು ಸಂಸದರ ವಿರೋಧ : ಟಿಎಂಸಿ ಬಂಡಾಯ ಗುಂಪಿನೊಳಗೇ ಒಡಕು



















