ಚೆನ್ನೈ : ತಮಿಳುನಾಡು ಚುನಾವಣೆ ಫಲಿತಾಂಶ ಬಂದು 5 ದಿನಗಳಾದರೂ ಸರ್ಕಾರ ರಚನೆಗೆ ನನೆಗುದಿಗೆ ಬಿದ್ದಿದೆಯಲ್ಲದೆ, ಅಲ್ಲಿನ ರಾಜಕಾರಣದಲ್ಲಿ ದಿನಕ್ಕೊಂದು ಹೈಡ್ರಾಮಾ ನಡೆಯುತ್ತಿದೆ. ಸಿನಿಮಾದಿಂದ ರಾಜಕೀಯಕ್ಕೆ ಧುಮುಕಿ ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಯಶಸ್ಸು ಕಂಡಿರುವ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಮುಖ್ಯಮಂತ್ರಿ ಪಟ್ಟದ ಕನಸಿಗೆ ಸದ್ಯಕ್ಕಂತೂ ವಿಘ್ನಗಳು ನಿವಾರಣೆಯಾದಂತೆ ಕಾಣುತ್ತಿಲ್ಲ.
ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ ತಲುಪಲು ಹೆಣಗಾಡುತ್ತಿರುವ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವನ್ನು ‘ವಿದುತಲೈ ಸಿರುತೈಗಳ್ ಕಚ್ಚಿ’ (ವಿಸಿಕೆ) ಪಕ್ಷ ತುದಿಗಾಲಿನಲ್ಲಿ ನಿಲ್ಲಿಸಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಬೆಂಬಲ ಹಿಂಪಡೆದ ಬೆನ್ನಲ್ಲೇ, ವಿಸಿಕೆ ಪಕ್ಷದ ನಿಗೂಢ ನಡೆಯಿಂದಾಗಿ ತಮಿಳುನಾಡಿನ ಮುಂದಿನ ಸರ್ಕಾರದ ಅಳಿವು-ಉಳಿವು ತೀವ್ರ ಕುತೂಹಲ ಕೆರಳಿಸಿದೆ.
ಕೈಕೊಟ್ಟ ಮಿತ್ರಪಕ್ಷಗಳು
ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಬಲದ ಅಗತ್ಯವಿದ್ದು, ಟಿವಿಕೆ ಪ್ರಸ್ತುತ ಮ್ಯಾಜಿಕ್ ನಂಬರ್ ತಲುಪಲು ಇತರೆ ಸಣ್ಣ ಪಕ್ಷಗಳ ಬೆಂಬಲದ ನಿರೀಕ್ಷೆಯಲ್ಲಿದೆ. ಆದರೆ, ಒಟ್ಟು ಮೂರು ಶಾಸಕರನ್ನು ಹೊಂದಿರುವ ಐಯುಎಂಎಲ್ ಹಾಗೂ ಎಎಂಎಂಕೆ ಪಕ್ಷಗಳು ಟಿವಿಕೆಗೆ ಸದ್ಯಕ್ಕೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಇದಕ್ಕೂ ಮುನ್ನ, ಈ ಶಾಸಕರ ಬೆಂಬಲ ತಮಗಿದೆ ಎಂದು ಟಿವಿಕೆ ವಿಶ್ವಾಸದಲ್ಲಿತ್ತು. ಇನ್ನೊಂದೆಡೆ, ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಕಟ್ಟುನಿಟ್ಟಿನ ನಿಲುವು ತಳೆದಿದ್ದು, ಸದನದಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡುವ ಬದಲು, 118 ಶಾಸಕರ ಬೆಂಬಲ ಪತ್ರವನ್ನು ಭೌತಿಕವಾಗಿ ಹಾಜರುಪಡಿಸುವಂತೆ ಸೂಚಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ, ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರ ಬಳಿ ತೆರಳಿದ್ದ ವಿಜಯ್ ತೀವ್ರ ಮುಜುಗರಕ್ಕೀಡಾಗಿ, ಬರಿಗೈಯಲ್ಲಿ ವಾಪಸಾಗುವಂತಾಗಿದೆ.
ಡಿಸಿಎಂ ಪಟ್ಟಕ್ಕೆ ವಿಸಿಕೆ ಬೇಡಿಕೆ
ಈ ಹೈವೋಲ್ಟೇಜ್ ರಾಜಕೀಯ ಡ್ರಾಮಾದಲ್ಲಿ ಇದೀಗ ಪ್ರಮುಖ ಪಾತ್ರ ವಹಿಸುತ್ತಿರುವುದು ಇಬ್ಬರು ಶಾಸಕರನ್ನು ಹೊಂದಿರುವ ವಿಸಿಕೆ ಪಕ್ಷ. ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರು ಕಮ್ಯುನಿಸ್ಟ್ (ಸಿಪಿಐ, ಸಿಪಿಎಂ) ಹಾಗೂ ವಿಸಿಕೆ ನಾಯಕರಿಗೆ ತಮ್ಮಿಷ್ಟದಂತೆ ನಿರ್ಧಾರ ಕೈಗೊಳ್ಳಲು ಮುಕ್ತ ಅವಕಾಶ ನೀಡಿದ್ದಾರೆ. ಕಾಂಗ್ರೆಸ್ (5) ಹಾಗೂ ಎಡಪಕ್ಷಗಳ (4) ಬೆಂಬಲ ಟಿವಿಕೆಗೆ ಖಚಿತವಾಗಿದೆ. ಆದರೆ, ವಿಸಿಕೆ ನಾಯಕ ಥೋಲ್ ತಿರುಮಾವಳವನ್ ಮಾತ್ರ ನಿರಂತರವಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸುತ್ತಿದ್ದಾರೆ. ವರದಿಗಳ ಪ್ರಕಾರ, ಕ್ಯಾಬಿನೆಟ್ ಸಚಿವ ಸ್ಥಾನದ ಜೊತೆಗೆ ತಿರುಮಾವಳವನ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಬೇಡಿಕೆಯನ್ನು ವಿಸಿಕೆ ಮುಂದಿಟ್ಟಿದೆ ಎನ್ನಲಾಗಿದೆ. ಶುಕ್ರವಾರ ಬೆಂಬಲ ನೀಡುವ ಸುಳಿವು ನೀಡಿ, ಮತ್ತೆ ಹಿಂದೇಟು ಹಾಕುತ್ತಿರುವ ವಿಸಿಕೆ ನಡೆಯಿಂದ ಟಿವಿಕೆ ಪಾಳಯದಲ್ಲಿ ಆತಂಕ ಮನೆಮಾಡಿದೆ.
ಹತ್ತಿರವಾಗುತ್ತಿದೆ ಗಡುವು: ಮರುಚುನಾವಣೆಯ ಭೀತಿ!
ತಮಿಳುನಾಡು ವಿಧಾನಸಭೆಯ ಅವಧಿ ಮೇ 10ಕ್ಕೆ (ಸೋಮವಾರ) ಮುಕ್ತಾಯಗೊಳ್ಳಲಿದೆ. ಈ ಗಡುವಿನೊಳಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರದಿದ್ದರೆ, ವಿಜಯ್ ಅವರ ಚುನಾವಣಾ ವಿಜಯಗಳೆಲ್ಲವೂ ಅರ್ಥಹೀನವಾಗಲಿದ್ದು, ರಾಜ್ಯದಲ್ಲಿ ಮರುಚುನಾವಣೆ ನಡೆಯುವ ಅನಿವಾರ್ಯತೆಯನ್ನು ರಾಜ್ಯಪಾಲರು ಸೃಷ್ಟಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ, ಬಹುಮತದ ಕೊರತೆ ನೀಗಿಸಲು ಇಂದು (ಶನಿವಾರ) ವಿಜಯ್ ಅವರು ಖುದ್ದಾಗಿ ವಿಸಿಕೆ ನಾಯಕ ತಿರುಮಾವಳವನ್ ಅವರನ್ನು ಭೇಟಿಯಾಗಲಿದ್ದು, ಸಂಜೆ 4 ಗಂಟೆಯ ಸುಮಾರಿಗೆ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಈ ನಿರ್ಣಾಯಕ ಭೇಟಿಯು ವಿಜಯ್ ಅವರ ಮುಖ್ಯಮಂತ್ರಿ ಕನಸನ್ನು ನನಸು ಮಾಡುತ್ತದೆಯೋ ಅಥವಾ ತಮಿಳುನಾಡನ್ನು ಮತ್ತೆ ಚುನಾವಣಾ ಅಖಾಡಕ್ಕೆ ದೂಡುತ್ತದೆಯೋ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : 2 ಮಕ್ಕಳ ತಾಯಿ ಜೊತೆ ಲಿವ್ ಇನ್ ರಿಲೇಶನ್ನಲ್ಲಿದ್ದ ಯುವಕ ಶವವಾಗಿ ಪತ್ತೆ – ಮಹಿಳೆ ಎಸ್ಕೇಪ್!


















