ಟೆಹ್ರಾನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕ್ಯಾಥೋಲಿಕ್ ಧರ್ಮಗುರು ಪೋಪ್ 14ನೇ ಲಿಯೋ ನಡುವಿನ ಶೀತಲ ಸಮರ ಇದೀಗ ಜಾಗತಿಕ ರಾಜತಾಂತ್ರಿಕ ಸಂಘರ್ಷಕ್ಕೆ ನಾಂದಿ ಹಾಡಿದೆ. ಯುದ್ಧ ಬೇಡ, ಶಾಂತಿ ಬೇಕು ಎಂದ ಪೋಪ್ ವಿರುದ್ಧ ಅತ್ತ ಟ್ರಂಪ್ ಹರಿಹಾಯ್ದಿದ್ದರೆ, ಯುದ್ಧ ಮತ್ತು ಹಿಂಸಾಚಾರದ ವಿರುದ್ಧ ಪೋಪ್ ಧೈರ್ಯದಿಂದ ಧ್ವನಿ ಎತ್ತಿರುವುದನ್ನು ಇರಾನ್ ಶ್ಲಾಘಿಸಿದೆ. ಜೊತೆಗೆ ಅಮೆರಿಕದ ಟೀಕೆಗಳ ವಿರುದ್ಧ ವ್ಯಾಟಿಕನ್ ಪರವಾಗಿ ನಿಂತಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್ ಅವರು ಪೋಪ್ ಲಿಯೋ 14 ಅವರ ನಿಲುವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ನನಗೆ ಭಯವಿಲ್ಲ” (I have no fear) ಎಂಬ ಪೋಪ್ ಅವರ ಘೋಷಣೆಯು ಶಾಂತಿ ಪ್ರತಿಪಾದಕರಿಗೆ ದಾರಿದೀಪವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಇಸ್ರೇಲ್ ಮತ್ತು ಅಮೆರಿಕದ ಮೇಲೆ ಯುದ್ಧಾಪರಾಧಗಳ ಆರೋಪ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ, ಪೋಪ್ ಅವರ ಮಾತುಗಳು ಮುಗ್ಧ ಜನರ ಹತ್ಯೆಯ ವಿರುದ್ಧ ಇರುವ ನೈತಿಕ ನಿಲುವಾಗಿದೆ ಎಂದು ಖಾಲಿಬಾಫ್ ಎಕ್ಸ್ (ಟ್ವಿಟರ್) ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
“ನಾನು ರಾಜಕಾರಣಿಯಲ್ಲ”: ಟ್ರಂಪ್‌ಗೆ ಪೋಪ್ ಲಿಯೋ ಉತ್ತರ
ತಮ್ಮ ವಿರುದ್ಧ ಡೊನಾಲ್ಡ್ ಟ್ರಂಪ್ ಮಾಡಿರುವ ಟೀಕೆಗಳಿಗೆ ಪೋಪ್ ಲಿಯೋ ತಿರುಗೇಟು ನೀಡಿದ್ದಾರೆ. ಅಲ್ಜೀರಿಯಾಕ್ಕೆ ತೆರಳುವ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಸುವಾರ್ತೆಯ (Gospel) ಬಗ್ಗೆ ಮಾತನಾಡುತ್ತೇನೆ, ನಾನೊಬ್ಬ ರಾಜಕಾರಣಿಯಲ್ಲ. ಸುವಾರ್ತೆಯ ಸಂದೇಶವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು” ಎಂದು ನೇರವಾಗಿಯೇ ಉತ್ತರಿಸಿದ್ದಾರೆ. ಜಗತ್ತಿನಲ್ಲಿ ಲಕ್ಷಾಂತರ ಜನರು ಯುದ್ಧದಿಂದ ಸಂಕಟಪಡುತ್ತಿದ್ದಾರೆ, ಹೀಗಾಗಿ ಶಾಂತಿಗಾಗಿ ದ್ವೇಷ ಬಿಟ್ಟು ಸೇತುವೆಗಳನ್ನು ನಿರ್ಮಿಸುವುದು ತಮ್ಮ ಗುರಿಯೇ ಹೊರತು ರಾಜಕೀಯ ವಿವಾದಗಳಲ್ಲಿ ತೊಡಗುವುದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಏನಿದು ವಿವಾದ?
ಇದಕ್ಕೂ ಮುನ್ನ ತಮ್ಮ ‘ಟ್ರೂತ್ ಸೋಷಿಯಲ್’ ಸಾಮಾಜಿಕ ಜಾಲತಾಣದಲ್ಲಿ ಪೋಪ್ ಲಿಯೋ ವಿರುದ್ಧ ವಾಗ್ದಾಳಿ ನಡೆಸಿದ್ದ ಟ್ರಂಪ್, “ಪೋಪ್ ಲಿಯೋ ಅಪರಾಧ ತಡೆಗಟ್ಟುವಲ್ಲಿ ದುರ್ಬಲರಾಗಿದ್ದಾರೆ ಮತ್ತು ಅವರಿಗೆ ವಿದೇಶಾಂಗ ನೀತಿಯ ಬಗ್ಗೆ ಗೊತ್ತಿಲ್ಲ” ಎಂದು ಕಿಡಿಕಾರಿದ್ದರು. ಅಷ್ಟೇ ಅಲ್ಲದೆ, “ಅವರು ಅಮೆರಿಕದವರು ಎಂಬ ಕಾರಣಕ್ಕೆ ಮಾತ್ರ ಅವರನ್ನು ಪೋಪ್ ಸ್ಥಾನದಲ್ಲಿ ಕೂರಿಸಲಾಗಿದೆ. ನಾನು ಶ್ವೇತಭವನದಲ್ಲಿ ಇಲ್ಲದಿದ್ದರೆ, ಅವರು ವ್ಯಾಟಿಕನ್‌ನಲ್ಲಿ ಇರುತ್ತಿರಲಿಲ್ಲ” ಎಂದು ಟ್ರಂಪ್ ಹರಿಹಾಯ್ದಿದ್ದರು. ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಈ ಸಂದರ್ಭದಲ್ಲಿ ಪೋಪ್ ಮತ್ತು ಟ್ರಂಪ್ ನಡುವಿನ ಈ ಸಂಘರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಮಹಿಳಾ ಟಿ20 ವಿಶ್ವಕಪ್ 2026 : ಚಾಂಪಿಯನ್ನರಿಗೆ ಸಿಗಲಿದೆ ದಾಖಲೆ ಮಟ್ಟದ ಬಹುಮಾನ ಮೊತ್ತ!



















