ವಾಷಿಂಗ್ಟನ್ : ಇತ್ತೀಚೆಗೆ ಕಿರ್ಗಿಸ್ತಾನದ ಬಿಷ್ಕೇಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯ ನೇಪಥ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ಜಾಗತಿಕ ಮಟ್ಟದಲ್ಲಿ ತೀವ್ರ ಗಮನ ಸೆಳೆದಿತ್ತು. ಈ ಮಾತುಕತೆಯ ಬೆನ್ನಲ್ಲೇ, ಇರಾನ್ ಮೇಲೆ ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು ಉಲ್ಲಂಘಿಸಿ ಆ ದೇಶಕ್ಕೆ ಯಾವುದಾದರೂ ದೇಶ ನೆರವಾದರೆ, ಅಂಥ ರಾಷ್ಟ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಮೆರಿಕ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಎಚ್ಚರಿಸಿದ್ದಾರೆ.
ಬಿಷ್ಕೇಕ್‌ನಲ್ಲಿ ನಡೆದ ಮೋದಿ-ಪೆಜೆಶ್ಕಿಯಾನ್ ಭೇಟಿಯ ನಂತರ ಭಾರತ ಮತ್ತು ಇರಾನ್ ನಡುವೆ ಹೊಸ ವ್ಯಾಪಾರ ಒಪ್ಪಂದ ಏರ್ಪಡುತ್ತಿದೆ ಎಂಬ ವರದಿಗಳು ಹರಿದಾಡಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮಾರ್ಕೊ ರೂಬಿಯೊ, “ಭಾರತ ಮತ್ತು ಇರಾನ್ ನಡುವೆ ಯಾವುದೇ ಹೊಸ ಆರ್ಥಿಕ ಅಥವಾ ವ್ಯಾಪಾರ ಒಪ್ಪಂದ ನಡೆಯುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಪ್ರತಿಯೊಂದು ದೇಶವೂ ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರುತ್ತದೆ. ಇರಾನ್ ಸರ್ಕಾರದೊಂದಿಗೆ ಮಾತುಕತೆ ಸಾಮಾನ್ಯ ವಿಷಯ. ಅಮೆರಿಕವೂ ಸ್ವತಃ ಕೆಲವು ಚರ್ಚೆಗಳ ಭಾಗವಾಗಿ ಇರಾನ್ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದೆ ಎಂದು ರೂಬಿಯೊ ಹೇಳಿದ್ದಾರೆ.
ಆರ್ಥಿಕ ನಿರ್ಬಂಧ ಮೀರಿದರೆ ಪರಿಣಾಮ ಎದುರಿಸಬೇಕಾದೀತು
ಇದೇ ಸಂದರ್ಭದಲ್ಲಿ, ವಿಶ್ವದ ಯಾವುದೇ ದೇಶವೂ ಇರಾನ್‌ಗೆ ಅಮೆರಿಕ ವಿಧಿಸಿರುವ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಬಾರದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವನ್ನು ರೂಬಿಯೊ ಪುನರುಚ್ಚರಿಸಿದರು. ಇರಾನ್ ಆದಾಯ ಗಳಿಸಲು ಅಥವಾ ಹೊಸ ಹಣಕಾಸು ಮಾರ್ಗಗಳನ್ನು ಕಂಡುಕೊಳ್ಳಲು ನೆರವಾಗುವ ದೇಶಗಳು ತಾವೇ ಅಮೆರಿಕದ ಆರ್ಥಿಕ ನಿರ್ಬಂಧಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಇರಾನ್ ಗಳಿಸುವ ಆದಾಯವನ್ನು ಭಯೋತ್ಪಾದನೆಗೆ ಬೆಂಬಲ ನೀಡಲು ಹಾಗೂ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳುತ್ತದೆ, ಆದ್ದರಿಂದ ಆ ಆದಾಯದ ಮೂಲಗಳನ್ನು ತಡೆಯುವುದು ಅಮೆರಿಕದ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಇರಾನ್‌ಗೆ ಅಣ್ವಸ್ತ್ರ ತಡೆ’ ಅಮೆರಿಕದ ಮುಖ್ಯ ಗುರಿ
ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಅಮೆರಿಕ ಪುನರುಚ್ಚರಿಸಿದೆ. ಟ್ರಂಪ್ ಆಡಳಿತಾವಧಿಯಲ್ಲಿ ಇರಾನ್‌ಗೆ ಅಣ್ವಸ್ತ್ರ ತಲುಪದಂತೆ ನೋಡಿಕೊಳ್ಳುವುದೇ ವಾಷಿಂಗ್ಟನ್‌ನ ಪ್ರಮುಖ ಗುರಿಯಾಗಿದೆ. ಇರಾನ್ ಮೇಲಿನ ಒತ್ತಡ ಹೆಚ್ಚಿಸಲು ಆರ್ಥಿಕ ನಿರ್ಬಂಧಗಳು ಮುಖ್ಯ ಅಸ್ತ್ರವಾಗಿದ್ದರೂ, ಅಗತ್ಯ ಬಿದ್ದರೆ ಅಮೆರಿಕ ತನ್ನ ಮತ್ತು ತನ್ನ ಮಿತ್ರರಾಷ್ಟ್ರಗಳ ರಕ್ಷಣೆಗೆ ಸೇನಾ ಕಾರ್ಯಾಚರಣೆ ನಡೆಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ ಎಂದು ರೂಬಿಯೋ ಖಡಕ್ ಸಂದೇಶ ನೀಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಇತ್ತೀಚೆಗೆ ಪರಿಸ್ಥಿತಿ ತೀವ್ರ ಸಂಕೀರ್ಣಗೊಂಡಿದೆ. ಇರಾನ್ ಮೇಲಿನ ದಾಳಿಗಳನ್ನು ಸಮರ್ಥಿಸಿಕೊಂಡಿರುವ ಅಮೆರಿಕ, ತಾನು ಕಠಿಣ ಸೇನಾ ದಾಳಿ ನಡೆಸಿದ್ದು, ಅಗತ್ಯಬಿದ್ದಾಗ ಮತ್ತೊಮ್ಮೆ ದಾಳಿ ಮಾಡಲು ಸಿದ್ಧವಿರುವುದಾಗಿ ಹೇಳಿದೆ. ಇನ್ನೊಂದೆಡೆ, ಇರಾನ್‌ನ ಭದ್ರತಾ ಮಂಡಳಿ ಅಮೆರಿಕದ ಆರ್ಥಿಕ ದಿಗ್ಬಂಧನ ಹಾಗೂ ಯುದ್ಧತಂತ್ರಗಳನ್ನು ಎದುರಿಸಲು ‘ಹೊಸ ತಂತ್ರಜ್ಞಾನ’ ಮತ್ತು ಕಾರ್ಯತಂತ್ರವನ್ನು ಅಳವಡಿಸಿಕೊಂಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ ; ‘ಸ್ಪಾರ್ಕ್’ ಹೊಸ ಕಿಕ್ ನಿಮಗಾಗಿ..!



















