ಬೆಂಗಳೂರು : ದೇಶದಲ್ಲಿ ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಯುಪಿಐ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ. ಸಣ್ಣ ಗೂಡಂಗಡಿಗಳಲ್ಲೂ ಈಗ ಯುಪಿಐ ಕ್ಯೂಆರ್ ಕೋಡ್ ಅಂಟಿಸಲಾಗಿರುತ್ತದೆ. ಇದರ ಮಧ್ಯೆಯೇ, ಸಣ್ಣ ವ್ಯಾಪಾರಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮಹತ್ವದ ಸೂಚನೆ ನೀಡಿದೆ. ಯುಪಿಐ ಹಾಗೂ ಕ್ಯೂಆರ್ ಕೋಡ್ ಮೂಲಕ ಹಣ ಸ್ವೀಕರಿಸುವ ಅಂಗಡಿಗಳ ಮಾಲೀಕರು ತಮ್ಮ ಖಾತೆಯ ಮರು-ಕೆವೈಸಿಯನ್ನು ಸೆಪ್ಟೆಂಬರ್ 15ರೊಳಗೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದೆ.
ಸೆಪ್ಟೆಂಬರ್ 15ರೊಳಗೆ ರಸ್ತೆಬದಿಯ ಸಣ್ಣ ವ್ಯಾಪಾರಿಗಳು, ಚಹಾ ಅಂಗಡಿಗಳು, ತರಕಾರಿ ಮಾರಾಟಗಾರರು ಮತ್ತು ಕ್ಯೂಆರ್ ಕೋಡ್ ಮೂಲಕ ಹಣ ಸ್ವೀಕರಿಸುವ ಎಲ್ಲಾ ಸಣ್ಣ ಹಾಗೂ ದೊಡ್ಡ ಮರ್ಚೆಂಟ್ ಗಳು ರಿ-ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ, ಅವರ ಕ್ಯೂಆರ್ ಕೋಡ್ ಅನ್ನು ಬ್ಲಾಕ್ ಮಾಡುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ. ದೇಶದಲ್ಲಿ ಲಕ್ಷಾಂತರ ವ್ಯಾಪಾರಿಗಳಿದ್ದು, ಅವರಿಗೆ ಆರ್ ಬಿಐ ಸೂಚನೆಯ ಕುರಿತು ಹೆಚ್ಚಿನ ಮಾಹಿತಿ ಇರುವುದಿಲ್ಲ. ಇವರಿಗೆ ಕೆವೈಸಿ ಮಾಡಿಸುವುದು ಕಷ್ಟವಾಗಬಹುದು ಎಂದು ಹೇಳಲಾಗುತ್ತಿದೆ.
ಏಕಿಂಥಾ ಸೂಚನೆ?
ಸೈಬರ್ ವಂಚನೆಗಳು, ಆನ್ ಲೈನ್ ಮೋಸಗಳು ಮತ್ತು ನಕಲಿ ಖಾತೆಗಳ ಮೂಲಕ ನಡೆಯುವ ಹಣ ವರ್ಗಾವಣೆಯನ್ನು ತಡೆಯಲು ಆರ್ ಬಿಐ ಇಂತಹ ಸೂಚನೆ ನೀಡಿದೆ. ಸೆಂಟ್ರಲ್ ಕೆವೈಸಿ ಮೂಲಕ ಎಲ್ಲ ಮರ್ಚೆಂಟ್ ಗಳ ಅಧಿಕೃತ ಡೇಟಾವನ್ನು ಸುರಕ್ಷಿತವಾಗಿಡಲಾಗುತ್ತದೆ. ಇದರ ಜತೆಗೆ, ವ್ಯಾಪಾರಿಗಳು, ಅಂಗಡಿಗಳ ಮಾಲೀಕರು ಬೇರೆಯವರ ಹೆಸರಿನ ಖಾತೆಯ ಕ್ಯೂಆರ್ ಕೋಡ್ ಅಳವಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದು ಕೂಡ ರಿ-ಕೆವೈಸಿಗೆ ಸೂಚನೆ ನೀಡಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕ್ಯೂಆರ್ ಕೋಡ್ ಬ್ಲಾಕ್ ಆಗಿ ಪೇಮೆಂಟ್ ಪಡೆಯಲು ಕಷ್ಟವಾಗುವ ಕಾರಣ ವ್ಯಾಪಾರಿಗಳು ರಿ-ಕೆವೈಸಿ ಮಾಡಿಸಬಹುದು. ಯುಪಿಐ ಮೂಲಕ ವ್ಯಾಪಾರ ಮಾಡುವವರು ಸೆಪ್ಟೆಂಬರ್ 15 ರೊಳಗೆ ಸಂಬಂಧಿತ ಪಾವತಿ ಆ್ಯಪ್ (ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇತ್ಯಾದಿ) ಅಥವಾ ಬ್ಯಾಂಕ್ ಮೂಲಕ ರಿ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ.
ಇದನ್ನೂ ಓದಿ : 2027ರ ವಿಶ್ವಕಪ್ಗೆ ರೋಹಿತ್ ಶರ್ಮಾ ಇರ್ತಾರಾ? ಬಿಸಿಸಿಐ ಸಭೆಯಲ್ಲಿ ಭವಿಷ್ಯದ ಬಗ್ಗೆ ಮಹತ್ವದ ಚರ್ಚೆ!



















