ನವದೆಹಲಿ : ಭಾರತ-ಪಾಕ್ ಸಂಘರ್ಷದ ವೇಳೆ ಅಂದರೆ 2019ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ, ದೇಶಾದ್ಯಂತ ಮನೆಮಾತಾಗಿದ್ದ ಭಾರತೀಯ ವಾಯುಪಡೆಯ (IAF) ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರು ಸೇನೆಯಿಂದ ಅವಧಿಗೂ ಮುನ್ನವೇ ನಿವೃತ್ತಿ ಪಡೆದಿದ್ದಾರೆ. ಸುಮಾರು 22 ವರ್ಷಗಳ ಕಾಲ ದೇಶದ ಸೇನೆಯಲ್ಲಿ ಅಪಾರ ಸೇವೆ ಸಲ್ಲಿಸಿದ ನಂತರ, ಅವರು ವಾಣಿಜ್ಯ ವಿಮಾನ ಚಾಲಕನಾಗಿ (ಕಮರ್ಷಿಯಲ್ ಪೈಲಟ್) ಇದೀಗ ತಮ್ಮ ವೃತ್ತಿಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೋವಾ ಮೂಲದ ಏರ್‌ಲೈನ್ಸ್ ಸೇರ್ಪಡೆ
ಅಭಿನಂದನ್ ವರ್ಧಮಾನ್ ಅವರು ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ ‘ಫ್ಲೈ19’ (FLY91)ಗೆ ಸೇರ್ಪಡೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ. ಅವರು ಕಳೆದ ಆಗಸ್ಟ್‌ನಲ್ಲಿ ಈ ಖಾಸಗಿ ಏರ್‌ಲೈನ್ಸ್‌ಗೆ ಪೈಲಟ್ ಆಗಿ ಸೇರಿಕೊಂಡಿದ್ದಾರೆ. ಆದಾಗ್ಯೂ, ತಮ್ಮ ಈ ನಿರ್ಧಾರದ ಬಗ್ಗೆ ಅವರು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ನೌಕರರ ವೈಯಕ್ತಿಕ ವಿಚಾರ ಎಂಬ ಕಾರಣ ನೀಡಿ ಫ್ಲೈ19 ಸಂಸ್ಥೆಯ ವಕ್ತಾರರು ಕೂಡ ಈ ಕುರುತಪ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದ್ದಾರೆ. 2024ರ ಮಾರ್ಚ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದ ಈ ವಿಮಾನಯಾನ ಸಂಸ್ಥೆಯು ಸದ್ಯ 6 ಎಟಿಆರ್ 72-600 ವಿಮಾನಗಳೊಂದಿಗೆ ಗೋವಾ ಮತ್ತು ಹೈದರಾಬಾದ್‌ನಿಂದ ಸೇವೆ ಒದಗಿಸುತ್ತಿದೆ.
ಯಾರಿವರು ಅಭಿನಂದನ್?
2019ರ ಫೆಬ್ರವರಿಯಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ತೆರಳುತ್ತಿದ್ದ ವಾಹನದ ಮೇಲೆ ಉಗ್ರರು ಸ್ಫೋಟಕ ತುಂಬಿದ್ದ ವಾಹನವನ್ನು ಡಿಕ್ಕಿ ಹೊಡೆಸಿ 40ಕ್ಕೂ ಅಧಿಕ ಯೋಧರ ಸಾವಿಗೆ ಕಾರಣರಾಗಿದ್ದರು. ಈ ಭೀಕರ ದಾಳಿಗೆ ಪ್ರತಿಯಾಗಿ ಭಾರತವು ಬಾಲಾಕೋಟ್‌ನಲ್ಲಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿತ್ತು.
ಇದರ ಮಾರನೇ ದಿನ ಅಂದರೆ ಫೆಬ್ರವರಿ 27ರಂದು ಪಾಕಿಸ್ತಾನದ ವಾಯುಪಡೆಯು ಭಾರತದ ಗಡಿ ದಾಟಿ ಅತಿಕ್ರಮಣ ಮಾಡಲು ಯತ್ನಿಸಿತು. ಈ ಸಂದರ್ಭದಲ್ಲಿ ತಮ್ಮ ಮಿಗ್-21 ಬೈಸನ್ ವಿಮಾನದ ಮೂಲಕ ಶತ್ರುಪಡೆಯ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದ ಆಗಿನ ವಿಂಗ್ ಕಮಾಂಡರ್ ಅಭಿನಂದನ್ ಅವರು, ಪಾಕಿಸ್ತಾನದ ಅತ್ಯಾಧುನಿಕ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು. ಇದೇ ವೇಳೆ ಅವರ ವಿಮಾನವೂ ಪತನಗೊಂಡು, ಅವರು ಪಾಕಿಸ್ತಾನದ ನೆಲಕ್ಕೆ ಹೋಗಿ ಬಿದ್ದಿದ್ದರು. ಈ ವೇಳೆ ಅವರನ್ನು ಪಾಕ್ ಸೇನೆ ವಶಕ್ಕೆ ಪಡೆದಿತ್ತು. 3 ದಿನಗಳ ಕಾಲ ಅವರನ್ನು ವಶದಲ್ಲಿ ಇಟ್ಟಿದ್ದ ಪಾಕಿಸ್ತಾನ, ಭಾರತದ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಮಾರ್ಚ್ 1 ರಂದು ನಿಯಮ ಪ್ರಕಾರ ಬಿಡುಗಡೆ ಮಾಡಿತ್ತು.
ದೇಶದ ಮೂರನೇ ಅತ್ಯುನ್ನತ ಸೇನಾ ಗೌರವ
ಅಸಾಮಾನ್ಯ ಶೌರ್ಯ, ಕರ್ತವ್ಯ ನಿಷ್ಠೆ ಹಾಗೂ ಧೈರ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಭಾರತ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ಯುದ್ಧಕಾಲದ ಸಾಹಸ ಪ್ರಶಸ್ತಿಯಾದ ‘ವೀರ ಚಕ್ರ’ ನೀಡಿ ಗೌರವಿಸಿತು. ನಂತರದ ದಿನಗಳಲ್ಲಿ ವಾಯುಪಡೆಯು ಅವರಿಗೆ ‘ಗ್ರೂಪ್ ಕ್ಯಾಪ್ಟನ್’ ಹುದ್ದೆಗೆ ಬಡ್ತಿ ನೀಡಿ ಗೌರವಿಸಿತ್ತು. ಆದರೆ ಈಗ ಅವರು ಸೇನೆಯ ಸೇವೆಯಿಂದ ನಿವೃತ್ತರಾಗಿ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ ; ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ 48 ಹುದ್ದೆಗಳ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ


















