ಜಿನೀವಾ : ಜಗತ್ತಿನಾದ್ಯಂತ ಮತ್ತೆ ಸಾಂಕ್ರಾಮಿಕ ರೋಗದ ಆತಂಕ ಮೂಡಿಸುತ್ತಿರುವ ಹಂಟಾವೈರಸ್ (Hantavirus) ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಮಹತ್ವದ ಸ್ಪಷ್ಟನೆ ನೀಡಿದೆ. ಹಡಗೊಂದರಲ್ಲಿ ಕಾಣಿಸಿಕೊಂಡಿರುವ ಈ ವೈರಸ್ ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳಿಗೆ ತೆರೆ ಎಳೆದಿರುವ ಡಬ್ಲ್ಯುಎಚ್ಒ ತಜ್ಞರು, “ಇದು ಕೋವಿಡ್ ಅಥವಾ ಇನ್ಫ್ಲುಯೆಂಜಾ ಅಲ್ಲ, ಇದು ಹರಡುವ ರೀತಿ ಸಂಪೂರ್ಣ ಭಿನ್ನವಾಗಿದೆ” ಎಂದು ತಿಳಿಸಿದ್ದಾರೆ. ಹೀಗಾಗಿ ಮತ್ತೊಂದು ಲಾಕ್‌ಡೌನ್ ಅಥವಾ ಜಾಗತಿಕ ಸಾಂಕ್ರಾಮಿಕದ ಭಯ ಬೇಕಿಲ್ಲ ಎಂಬ ಸಮಾಧಾನದ ಸಂಗತಿ ಹೊರಬಿದ್ದಿದೆ.
ಕೋವಿಡ್‌ಗಿಂತ ಇದು ಹೇಗೆ ಭಿನ್ನ?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗ ನಿರ್ವಹಣಾ ವಿಭಾಗದ ನಿರ್ದೇಶಕಿ ಡಾ. ಮರಿಯಾ ವಾನ್ ಕೆರ್ಖೋವ್, ಹಂಟಾವೈರಸ್ ಮತ್ತು ಕರೋನಾ ವೈರಸ್ ನಡುವೆ ಇರುವ ವ್ಯತ್ಯಾಸಗಳನ್ನು ವಿವರಿಸಿದ್ದಾರೆ. ಕೋವಿಡ್ ಗಾಳಿಯ ಮೂಲಕ ವೇಗವಾಗಿ ಹರಡಬಲ್ಲದು ಮತ್ತು ಅಲ್ಪ ಕಾಲದಲ್ಲಿಯೇ ಜಾಗತಿಕವಾಗಿ ವ್ಯಾಪಿಸುವ ಶಕ್ತಿ ಹೊಂದಿದೆ. ಆದರೆ ಹಂಟಾವೈರಸ್ ಮೂಲತಃ ಪ್ರಾಣಿಜನ್ಯ ರೋಗವಾಗಿದ್ದು, ಇದು ದಂಶಕಗಳಿಂದ (ಇಲಿ, ಹೆಗ್ಗಣ) ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೆ ಈ ವೈರಸ್ ಹರಡುವುದು ಅತ್ಯಂತ ವಿರಳವಾಗಿದ್ದು, ಕೇವಲ ‘ಆಂಡಿಸ್’ (Andes) ಎಂಬ ತಳಿಯ ವೈರಸ್ ಮಾತ್ರ ಅತ್ಯಂತ ನಿಕಟ ಸಂಪರ್ಕದಿಂದ ಹರಡಬಲ್ಲದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಡಗಿನಲ್ಲಿ ಕಂಡುಬಂದ ಸೋಂಕು
ಪ್ರಸ್ತುತ ಕ್ರೂಸ್ ಹಡಗೊಂದರಲ್ಲಿ ಕಾಣಿಸಿಕೊಂಡಿರುವ ಸೋಂಕಿನ ಬಗ್ಗೆ ಮಾಹಿತಿ ನೀಡಿದ ಡಾ. ಅಬ್ದಿರಾಹ್ಮನ್ ಮಹಮೂದ್, 2018-19ರಲ್ಲಿ ಅರ್ಜೆಂಟೀನಾದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ಸಾಮಾಜಿಕ ಸಮಾರಂಭವೊಂದರಲ್ಲಿ ನಿಕಟ ಸಂಪರ್ಕ ಹೊಂದಿದ್ದರಿಂದ ಸೋಂಕು ಹರಡಿತ್ತು. ಈಗ ಹಡಗಿನಂತಹ ಸೀಮಿತ ಪ್ರದೇಶದಲ್ಲಿ ಜನರು ದೀರ್ಘಕಾಲ ನಿಕಟ ಸಂಪರ್ಕದಲ್ಲಿ ಇರುವುದರಿಂದ ಕೆಲವರಿಗೆ ಸೋಂಕು ತಗುಲಿದೆ. ಆದರೆ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅನುಸರಿಸಿದರೆ, ಸೋಂಕಿತರನ್ನು ಪ್ರತ್ಯೇಕಿಸಿ (Isolation) ಮತ್ತು ಅವರ ಸಂಪರ್ಕಿತರನ್ನು ಪತ್ತೆಹಚ್ಚುವ (Contact Tracing) ಮೂಲಕ ಈ ಸೋಂಕಿನ ಸರಪಳಿಯನ್ನು ಸುಲಭವಾಗಿ ಕಡಿಯಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾರಕವಾದರೂ ಹರಡುವಿಕೆ ಕಡಿಮೆ
ಹಂಟಾವೈರಸ್ ಕೋವಿಡ್‌ಗಿಂತ ಹೆಚ್ಚು ಪ್ರಾಣಾಪಾಯ ಉಂಟುಮಾಡುವ ಸಾಮರ್ಥ್ಯ ಹೊಂದಿದೆ. ಪ್ರಕರಣದಿಂದ ಪ್ರಕರಣಕ್ಕೆ ಹೋಲಿಸಿದರೆ ಇದು ಹೆಚ್ಚು ಮಾರಕವಾಗಿದೆ. ಆದರೆ, ಇದು ಗಾಳಿಯಲ್ಲಿ ದೀರ್ಘಕಾಲ ಉಳಿಯುವುದಿಲ್ಲ ಮತ್ತು ಗುಂಪು ಗುಂಪಾಗಿ ಜನರಿಗೆ ಹರಡುವುದಿಲ್ಲ. ಹಾಗಾಗಿ ಇದು ಜಾಗತಿಕ ಸಾಂಕ್ರಾಮಿಕ ಆಗುವ ಸಾಧ್ಯತೆ ತೀರಾ ಕಡಿಮೆ ಎಂದು ಡಾ. ಟೆಡ್ರೋಸ್ ಅದಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ. ಈ ವೈರಸ್‌ನ ಸುಪ್ತಾವಸ್ಥೆಯ ಅವಧಿ ಆರು ವಾರಗಳವರೆಗೆ ಇರುವುದರಿಂದ ಹೆಚ್ಚಿನ ಪ್ರಕರಣಗಳು ವರದಿಯಾಗಬಹುದು, ಆದರೆ ಸದ್ಯಕ್ಕೆ ಇದರಿಂದ ಸಾರ್ವಜನಿಕರಿಗೆ ಇರುವ ಅಪಾಯ ಕಡಿಮೆ ಎಂದಿದ್ದಾರೆ.
ಇದನ್ನೂ ಓದಿ : 15 ವರ್ಷದ ಬಳಿಕ ಕತ್ತರಿ ಕಂಡ ಕೂದಲು – ಬಂಗಾಳದಲ್ಲಿ ದೀದಿ ಸೋಲುತ್ತಿದ್ದಂತೆ ಶಪಥ ಪೂರೈಸಿದ ಬಿಜೆಪಿಗ!



















