ಕಠ್ಮಂಡು/ಪಾಟ್ನಾ: ಹಿಮಾಲಯನ್ ರಾಷ್ಟ್ರ ನೇಪಾಳದಲ್ಲಿ ಗಾಂಜಾ ಕೃಷಿ ಮತ್ತು ಬಳಕೆ ಮೇಲಿನ ಕಟ್ಟುನಿಟ್ಟಿನ ನಿಷೇಧದ ನಡುವೆಯೇ, ಗಂಡಕಿ ಪ್ರಾಂತ್ಯವು ದೇಶದಲ್ಲೇ ಮೊದಲ ಬಾರಿಗೆ ವೈದ್ಯಕೀಯ ಉದ್ದೇಶದ ಗಾಂಜಾ ಕೃಷಿಗೆ ಅಧಿಕೃತ ಮಾನ್ಯತೆ ನೀಡಿದೆ. ಗಂಡಕಿ ಪ್ರಾಂತ್ಯದ ಮುಖ್ಯಸ್ಥರು ಈ ನೂತನ ಮಸೂದೆಗೆ ಅಂಕಿತ ಹಾಕುವುದರೊಂದಿಗೆ ಕಾಯ್ದೆ ಜಾರಿಗೆ ಬಂದಿದೆ. ವಿಚಿತ್ರವೆಂದರೆ, ಈ ಗಂಡಕಿ ಪ್ರಾಂತ್ಯವು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿನಗರ ಗಡಿಗೆ ತಾಗಿಕೊಂಡಿದೆ. ಬಿಹಾರದಲ್ಲಿ ಈಗಾಗಲೇ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಯಲ್ಲಿದ್ದು, ನೆರೆರಾಷ್ಟ್ರದ ಈ ನಿರ್ಧಾರವು ಗಡಿಭಾಗದಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಮೂಡಿಸಿದೆ.
ಗಂಡಕಿ ಪ್ರಾಂತ್ಯಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಏಕಕಂಠದಿಂದ ಬೆಂಬಲಿಸಿ ಅಂಗೀಕರಿಸಿರುವ ಈ ಕಾಯ್ದೆಯು, ಕೇವಲ ವೈದ್ಯಕೀಯ ಮತ್ತು ವೈಜ್ಞಾನಿಕ ಬಳಕೆಗೆ ಮಾತ್ರ ಸೀಮಿತವಾಗಿದೆ. ಮೋಜು-ಮಸ್ತಿಯ (Recreational use) ಬಳಕೆಗೆ ಇದರಲ್ಲಿ ಅವಕಾಶವಿಲ್ಲ. ಗಾಂಜಾ ಬೆಳೆಯಲು ಇಚ್ಛಿಸುವ ರೈತರು ಪ್ರಾಂತ್ಯದ ಅಧಿಕೃತ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಸರ್ಕಾರವು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಿದೆ. ನೇಪಾಳದ ರಾಷ್ಟ್ರೀಯ ಮಾದಕ ದ್ರವ್ಯ ಕಾಯ್ದೆಯ ಪ್ರಕಾರ ಗಾಂಜಾ ಮಾರಾಟ ಅಥವಾ ಸಾಗಾಣಿಕೆಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಿದೆಯಾದರೂ, ಪ್ರಾಂತ್ಯ ಮಟ್ಟದಲ್ಲಿ ಈ ವಿಶೇಷ ವಿನಾಯಿತಿ ನೀಡಲಾಗಿದೆ.
ಸಂಸ್ಕೃತಿಯ ಭಾಗವಾಗಿದ್ದ ಗಾಂಜಾ
ನೇಪಾಳದಲ್ಲಿ ಗಾಂಜಾ ಕೇವಲ ಸಸ್ಯವಾಗಿರದೆ ದಶಕಗಳಿಂದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳ ಭಾಗವಾಗಿದೆ. ಮುಖ್ಯವಾಗಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಶಿವನ ದೇವಸ್ಥಾನಗಳಲ್ಲಿ ಗಾಂಜಾ ಸೇವನೆ ಸಾಮಾನ್ಯವಾಗಿದ್ದು, ಆಡಳಿತವೂ ಇದನ್ನು ಮೌನವಾಗಿ ಬೆಂಬಲಿಸುತ್ತಾ ಬಂದಿದೆ. 1970ರ ದಶಕದವರೆಗೆ ನೇಪಾಳದಲ್ಲಿ ಗಾಂಜಾ ಮುಕ್ತವಾಗಿ ಮಾರಾಟವಾಗುತ್ತಿತ್ತು. ನಂತರದ ದಿನಗಳಲ್ಲಿ ನಿಷೇಧ ಹೇರಲಾಗಿತ್ತು. ಇತ್ತ ಭಾರತದಲ್ಲೂ 1985 ರ ಎನ್‌ಡಿಪಿಎಸ್ ಕಾಯ್ದೆಯಡಿ ಗಾಂಜಾ ಹೂವು ಮತ್ತು ಅಂಟು (ಚರಸ್) ಬಳಕೆಯನ್ನು ನಿಷೇಧಿಸಲಾಗಿದೆಯಾದರೂ, ಎಲೆ ಮತ್ತು ಬೀಜಗಳಿಂದ ತಯಾರಿಸುವ ‘ಭಾಂಗ್’ ಗೆ ಕೆಲವು ರಾಜ್ಯಗಳಲ್ಲಿ ನಿಯಂತ್ರಿತ ವಿನಾಯಿತಿ ಇದೆ. ಬಿಹಾರದಲ್ಲಿ ಮದ್ಯ ಸಿಗದ ಕಾರಣ ‘ಸುಖಾ ನಶಾ’ (ಒಣ ಮಾದಕ ವಸ್ತು) ಕಡೆಗೆ ವಾಲುತ್ತಿರುವ ಜನರಿಗೆ, ಗಡಿಯಲ್ಲೇ ಸಿಗಲಿರುವ ಈ ಗಾಂಜಾ ಸೌಲಭ್ಯ ಹೊಸ ಸವಾಲೊಡ್ಡುವ ಸಾಧ್ಯತೆಯಿದೆ.


















