ಅಯೋಧ್ಯೆ : ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯ ಆಯ್ಕೆ ಪ್ರಕ್ರಿಯೆ ವೇಳೆ, ಅರ್ಜಿದಾರ ಅಭ್ಯರ್ಥಿಗಳಿಗೆ ಆಡಳಿತಾತ್ಮಕ ಕೌಶಲ್ಯಗಳ ಜೊತೆಗೆ ಅವರ ಧಾರ್ಮಿಕ ಆಚರಣೆ ಮತ್ತು ಜೀವನಶೈಲಿಗೆ ಸಂಬಂಧಿಸಿದ ಕಠಿಣ ಹಾಗೂ ಸ್ವಾರಸ್ಯಕರ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ದೇಗುಲ ಸಂಕೀರ್ಣದಲ್ಲಿ ಮಂಗಳವಾರ ಪ್ರಾರಂಭವಾದ ಸಂದರ್ಶನ ಪ್ರಕ್ರಿಯೆಯು ಇಂದೂ ಮುಂದುವರಿದಿದೆ.
5,000ಕ್ಕೂ ಹೆಚ್ಚು ಅರ್ಜಿಗಳು, 18 ಅಭ್ಯರ್ಥಿಗಳು ಅಂತಿಮ
ರಾಮಮಂದಿರದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಪೂರ್ಣಾವಧಿ ಸಿಇಒ ನೇಮಕ ಮಾಡಲು ಟ್ರಸ್ಟ್ ನಿರ್ಧರಿಸಿತ್ತು. ಈ ಹುದ್ದೆಗೆ ಬರೋಬ್ಬರಿ 5,200ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 18 ಅಭ್ಯರ್ಥಿಗಳನ್ನು ಅಂತಿಮ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಶಾರ್ಟ್‌ಲಿಸ್ಟ್ ಆದವರಲ್ಲಿ ಮಾಜಿ ಐಎಎಸ್, ಐಪಿಎಸ್ ಹಾಗೂ ಸೇನಾಧಿಕಾರಿಗಳಲ್ಲದೆ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳ ಮಾಜಿ ಹಿರಿಯ ಅಧಿಕಾರಿಗಳೂ ಸೇರಿದ್ದಾರೆ.
ಸಂದರ್ಶನದಲ್ಲಿ ಕೇಳಲಾದ ಪ್ರಮುಖ ಪ್ರಶ್ನೆಗಳೇನು?
ಪ್ರತಿಯೊಬ್ಬ ಅಭ್ಯರ್ಥಿಗೂ ಸುಮಾರು 40 ರಿಂದ 50 ನಿಮಿಷಗಳ ಕಾಲ ನಡೆದ ಸಂದರ್ಶನದಲ್ಲಿ, ಅವರ ಆಡಳಿತ ಸಾಮರ್ಥ್ಯ ಮತ್ತು ಜನಸಂದಣಿ ನಿರ್ವಹಣೆಯ (Crowd Management) ಜತೆಗೆ ವೈಯಕ್ತಿಕ ಹಾಗೂ ಧಾರ್ಮಿಕ ನಂಬಿಕೆಗಳ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. “ನೀವು ಜನಿವಾರ ಧರಿಸುತ್ತೀರಾ?”, “ನಿಮ್ಮ ತಲೆಯಲ್ಲಿ ಶಿಕಾ (ಜುಟ್ಟು) ಇದೆಯೇ?”, “ನೀವು ಕಟ್ಟುನಿಟ್ಟಿನ ಸಸ್ಯಾಹಾರಿಯೇ ಅಥವಾ ಮಾಂಸಾಹಾರ ಸೇವಿಸುತ್ತೀರಾ?”, “ಮದ್ಯಪಾನ ಮಾಡುತ್ತೀರಾ?”, “ನೀವು ಕಟ್ಟರ್ ಹಿಂದುವೇ ಅಥವಾ ಕೇವಲ ನಂಬಿಕೆಯುಳ್ಳ ಭಕ್ತರೇ?” ಎನ್ನುವಂತಹ ವೈಯಕ್ತಿಕ ಜೀವನಶೈಲಿಯ ಕುರಿತ ಪ್ರಶ್ನೆಗಳನ್ನು ನೇರವಾಗಿ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ 20,000 ದಿಂದ 5 ಲಕ್ಷದವರೆಗಿನ ಭಕ್ತರ ಸಮೂಹವನ್ನು ಹೇಗೆ ನಿರ್ವಹಿಸುತ್ತೀರಿ ಎನ್ನುವ ಆಡಳಿತಾತ್ಮಕ ಸವಾಲುಗಳನ್ನೂ ಅವರ ಮುಂದಿಡಲಾಗಿದೆ.
ಮುಂದಿನ ಪ್ರಕ್ರಿಯೆಯೇನು?
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿಷ್ಣುಕಾಂತ್ ಚತುರ್ವೇದಿ ಹಾಗೂ ಸುರೇಶ್ ಹಾವರೆ ಅವರನ್ನೊಳಗೊಂಡ ಮೂವರ ಸದಸ್ಯರ ಸಮಿತಿಯು ಈ ಸಂದರ್ಶನಗಳನ್ನು ನಡೆಸುತ್ತಿದೆ. ಈ ಸಮಿತಿಯು 18 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಮೂರು ಹೆಸರುಗಳನ್ನು ಸೂಚಿಸಲಿದ್ದು, ಸೆಪ್ಟೆಂಬರ್ 2 ರಂದು ನಡೆಯಲಿರುವ ಸಭೆಯಲ್ಲಿ ಟ್ರಸ್ಟ್ ಅಂತಿಮ ಸಿಇಒ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ.
ದೇಣಿಗೆ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದ್ದು, ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಮೂವರು ಅಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೂತನ ಸಿಇಒ ಆಯ್ಕೆಯು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ.
ಇದನ್ನೂ ಓದಿ : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 395 ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಕೆಗೆ ಮೂರೇ ದಿನ ಬಾಕಿ



















