ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ವರದಿಗಳ ಬೆನ್ನಲ್ಲೇ, ಅಮೆರಿಕದ ಭದ್ರತಾ ಪಡೆಗಳು ಜುಲೈ 8ರಂದು ಟರ್ಕಿಯಲ್ಲಿ ಅತ್ಯಂತ ಚಾಣಾಕ್ಷ ಹಾಗೂ ರೋಚಕ ಕಾರ್ಯಾಚರಣೆಯೊಂದನ್ನು ನಡೆಸಿವೆ. ಇರಾನ್‌ನಿಂದ ಎದುರಾದ ಪ್ರಾಣಾಪಾಯದ ಬೆದರಿಕೆಯ ಹಿನ್ನೆಲೆಯಲ್ಲಿ, ಟ್ರಂಪ್ ಅವರನ್ನು ಯಾರಿಗೂ ತಿಳಿಯದಂತೆ ಸೇನಾ ವಿಮಾನಕ್ಕೆ ಸ್ಥಳಾಂತರಿಸಿ, ಅಲ್ಲಿಂದ ರಹಸ್ಯವಾಗಿ ಕರೆದೊಯ್ಯಲಾಗಿದೆ. ಈ ಇಡೀ ಕಾರ್ಯಾಚರಣೆಯಲ್ಲಿ ಸಾಮಾನ್ಯ ವಿಮಾನ ನಿಲ್ದಾಣದ ಕೆಟರಿಂಗ್ ಟ್ರಕ್ ಒಂದು ಪ್ರಮುಖ ಪಾತ್ರ ವಹಿಸಿರುವುದು ಈಗ ಬೆಳಕಿಗೆ ಬಂದಿದೆ.
ನ್ಯಾಟೋ (NATO) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಟರ್ಕಿಗೆ ಆಗಮಿಸಿದ್ದ ಟ್ರಂಪ್, ವಾಪಸ್ ತೆರಳುವಾಗ ಹಳೆಯ ‘ಏರ್ ಫೋರ್ಸ್ ಒನ್’ ವಿಮಾನವನ್ನೇ ಏರಿದ್ದರು. ಮಾಧ್ಯಮಗಳ ಕ್ಯಾಮೆರಾಗಳ ಮುಂದೆ ಹಳೆಯ ಬೋಯಿಂಗ್ 747 ವಿಮಾನದ ಮೆಟ್ಟಿಲುಗಳನ್ನು ಹತ್ತಿ, ಸಾರ್ವಜನಿಕರಿಗೆ ಕೈಬೀಸಿ ವಿಮಾನದೊಳಗೆ ತೆರಳಿದ್ದರು. ಬ್ರಿಟನ್‌ನಲ್ಲಿರುವ ಅಮೆರಿಕನ್ ಪಡೆಗಳಿಗೆ ಹಳೆಯ ವಿಮಾನ ತೋರಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ವೇತಭವನ ಕೂಡ ಬಹಿರಂಗಪಡಿಸಿತ್ತು. ಆದರೆ, ಇದು ಕೇವಲ ಶತ್ರುಗಳ ದಿಕ್ಕು ತಪ್ಪಿಸಲು ಅಮೆರಿಕದ ಭದ್ರತಾ ವಿಭಾಗ ಹಣೆದಿದ್ದ ಮಾಸ್ಟರ್ ಪ್ಲಾನ್ ಆಗಿತ್ತು. ಟ್ರಂಪ್ ವಿಮಾನವೇರಿದ ತಕ್ಷಣವೇ ಅವರ ಸುರಕ್ಷಿತ ನಿರ್ಗಮನಕ್ಕೆ ತಂತ್ರ ರೂಪಿಸಲಾಯಿತು.
ಕೆಟರಿಂಗ್ ಟ್ರಕ್ ಮೂಲಕ ರಹಸ್ಯ ಸ್ಥಳಾಂತರ
ಮಾಧ್ಯಮಗಳ ಕಣ್ಣು ತಪ್ಪಿಸಲು, ಟ್ರಂಪ್ ಏರಿದ ವಿಮಾನದ ಮತ್ತೊಂದು ಬದಿಯಲ್ಲಿ ಆಹಾರ ಸರಬರಾಜು ಮಾಡುವ ಕೆಟರಿಂಗ್ ಟ್ರಕ್ ವೊಂದನ್ನು ತಂದು ನಿಲ್ಲಿಸಲಾಯಿತು. ಹೈಡ್ರಾಲಿಕ್ ವ್ಯವಸ್ಥೆಯ ಮೂಲಕ ಟ್ರಕ್‌ನ ಹಿಂಭಾಗದ ಕಂಟೇನರ್ ಅನ್ನು ವಿಮಾನದ ತುರ್ತು ಬಾಗಿಲ ಮಟ್ಟಕ್ಕೆ ಏರಿಸಿ, ಅಧ್ಯಕ್ಷ ಟ್ರಂಪ್ ಹಾಗೂ ಅವರ ನಿಕಟ ಸಹಾಯಕರನ್ನು ಯಾರಿಗೂ ಕಾಣದಂತೆ ಆ ಟ್ರಕ್‌ನೊಳಗೆ ತುಂಬಿಸಿ,ಕರೆದೊಯ್ಯಲಾಯಿತು. ನಂತರ ಆ ಟ್ರಕ್, ವಿಮಾನ ನಿಲ್ದಾಣದ ರನ್‍ವೇನಲ್ಲಿ ಸ್ವಲ್ಪ ದೂರದಲ್ಲೇ ಕಾಯುತ್ತಿದ್ದ ಚಿಕ್ಕ ಗಾತ್ರದ ‘ಸಿ-32ಎ’ ಸೇನಾ ವಿಮಾನದ ಬಳಿಗೆ ಸಾಗಿತು. ಅಲ್ಲಿಂದ ಟ್ರಂಪ್ ಅವರನ್ನು ಅತ್ಯಂತ ಗೌಪ್ಯವಾಗಿ ಸೇನಾ ವಿಮಾನಕ್ಕೆ ಏರಿಸಲಾಯಿತು. ವಿಶೇಷವೆಂದರೆ, ಮಾಧ್ಯಮ ಪ್ರತಿನಿಧಿಗಳು ಹಾಗೂ ಶ್ವೇತಭವನದ ಹಲವು ಸಿಬ್ಬಂದಿ ಟ್ರಂಪ್ ಹಳೆಯ ಬೋಯಿಂಗ್‌ನಲ್ಲೇ ಪ್ರಯಾಣಿಸುತ್ತಿದ್ದಾರೆ ಎಂದು ಭಾವಿಸಿ ಅದೇ ವಿಮಾನದಲ್ಲಿದ್ದರು.
ಎರಡೂ ವಿಮಾನಗಳು ಒಂದರ ಹಿಂದೆ ಒಂದರಂತೆ ಹೊರಟು, ಇಂಗ್ಲೆಂಡ್‌ನ ಮಧ್ಯಂತರ ನಿಲುಗಡೆ ತಾಣ ತಲುಪಿದವು. ಅಲ್ಲಿಯೂ ಸಹ ಟ್ರಂಪ್ ಹಳೆಯ ಏರ್ ಫೋರ್ಸ್ ಒನ್‌ನಿಂದಲೇ ಹೊರಬಂದಂತೆ ಸಾರ್ವಜನಿಕವಾಗಿ ಬಿಂಬಿಸಲಾಯಿತು. ಇಂತಹ ಭದ್ರತಾ ತಂತ್ರಗಳು ವಿರಳವಾದರೂ ಅಮೆರಿಕಕ್ಕೆ ಹೊಸದೇನಲ್ಲ. 2000ದಲ್ಲಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗಲೂ, ಮತ್ತೊಂದು ಸಾಮಾನ್ಯ ವಿಮಾನವನ್ನು ಬಳಸಿ ಅವರ ಪ್ರಯಾಣವನ್ನು ರಹಸ್ಯವಾಗಿಡಲಾಗಿತ್ತು. ಇದಲ್ಲದೆ 9/11 ದಾಳಿಯ ನಂತರ ಹಾಗೂ ಕಳೆದ ಮೂರು ದಶಕಗಳಲ್ಲಿ ಅಮೆರಿಕದ ಅಧ್ಯಕ್ಷರಿಗೆ ಗಂಭೀರ ಬೆದರಿಕೆಗಳು ಬಂದಾಗಲೆಲ್ಲಾ ‘ಏರ್ ಫೋರ್ಸ್ ಒನ್’ ಅನ್ನು ಡಿಕಾಯ್ (ದಿಕ್ಕು ತಪ್ಪಿಸುವ ಸಾಧನ) ಆಗಿ ಬಳಸಿರುವ ಉದಾಹರಣೆಗಳಿವೆ.
ಕತಾರ್ ನೀಡಿದ ವಿಮಾನದ ಸುತ್ತ ಅನುಮಾನ
ಇತ್ತೀಚೆಗಷ್ಟೇ ಕತಾರ್ ದೇಶವು ಅಮೆರಿಕಕ್ಕೆ ಅತ್ಯಾಧುನಿಕ ಬೋಯಿಂಗ್ 747-8 ವಿಮಾನವನ್ನು ಕೊಡುಗೆಯಾಗಿ ನೀಡಿತ್ತು. ಟ್ರಂಪ್ ಟರ್ಕಿಗೆ ಆಗಮಿಸಿದ್ದು ಇದೇ ವಿಮಾನದಲ್ಲಾದರೂ, ಪ್ರಾಣಾಪಾಯದ ಬೆದರಿಕೆ ಹೆಚ್ಚಿದ್ದರಿಂದ ಮತ್ತು ಈ ಹೊಸ ವಿಮಾನದಲ್ಲಿ ಇನ್ನೂ ಸಂಪೂರ್ಣ ಭದ್ರತಾ ರಕ್ಷಣಾ ವ್ಯವಸ್ಥೆಗಳು ಅಳವಡಿಕೆಯಾಗದ ಕಾರಣ, ಭದ್ರತಾ ಪಡೆಗಳು ಅಪಾಯ ಮೈಮೇಲೆ ಎಳೆದುಕೊಳ್ಳಲು ಸಿದ್ಧವಿರಲಿಲ್ಲ. ಆದರೆ, ಶ್ವೇತಭವನದ ವಕ್ತಾರರು ಈ ವರದಿಗಳನ್ನು ಸಮರ್ಥಿಸಿಕೊಂಡಿದ್ದು, ಅಧ್ಯಕ್ಷರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಉನ್ನತ ಮಟ್ಟದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಕಂಬ್ಯಾಕ್ ; ಶಾಯರಿ ಮೂಲಕ ಸಂಭ್ರಮಿಸಿದ ತಂದೆ ನೌಶಾದ್!



















