ನವದೆಹಲಿ : ಜಾಗತಿಕ ರಕ್ಷಣಾ ವಲಯದ ವೆಚ್ಚದಲ್ಲಿ ಭಾರತವು ವಿಶ್ವದ ಐದನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪ್ರಿ – SIPRI) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ಹೇಳಿದೆ.
2025ರ ಸಾಲಿನಲ್ಲಿ ಭಾರತವು ತನ್ನ ಸೇನಾ ಪಡೆಗಳಿಗಾಗಿ ಬರೋಬ್ಬರಿ 92.1 ಶತಕೋಟಿ ಡಾಲರ್ ವೆಚ್ಚ ಮಾಡಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.8.9ರಷ್ಟು ಹೆಚ್ಚು. ಜಾಗತಿಕ ಮಿಲಿಟರಿ ವೆಚ್ಚದಲ್ಲಿ ಭಾರತದ ಪಾಲು ಶೇ.3.2ರಷ್ಟಿದ್ದು, ಅಮೆರಿಕ, ಚೀನಾ, ರಷ್ಯಾ ಮತ್ತು ಜರ್ಮನಿ ಮಾತ್ರ ಭಾರತಕ್ಕಿಂತ ಮುಂದಿವೆ. ಪಾಕಿಸ್ತಾನದ ವಿರುದ್ಧ ನಡೆದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಹಾಗೂ ತುರ್ತು ಸೇನಾ ಖರೀದಿಗಳು ಈ ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ ಎಂದು ವರದಿ ವಿಶ್ಲೇಷಿಸಿದೆ.
ನೆರೆರಾಷ್ಟ್ರಗಳ ರಕ್ಷಣಾ ವೆಚ್ಚದ ಚಿತ್ರಣ
ಭಾರತದ ಸೇನಾ ವೆಚ್ಚದ ಹೆಚ್ಚಳಕ್ಕೆ ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಗಡಿ ಉದ್ವಿಗ್ನತೆಗಳೇ ಪ್ರಮುಖ ಪ್ರೇರಕ ಶಕ್ತಿ ಎಂದು ಸಿಪ್ರಿ ಉಲ್ಲೇಖಿಸಿದೆ. ನೆರೆಯ ರಾಷ್ಟ್ರಗಳೂ ಕೂಡ ತಮ್ಮ ರಕ್ಷಣಾ ಬಜೆಟ್ ಅನ್ನು ಗಣನೀಯವಾಗಿ ಹೆಚ್ಚಿಸಿವೆ. 336 ಶತಕೋಟಿ ಡಾಲರ್ ವೆಚ್ಚ ಮಾಡಿರುವ ಚೀನಾ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದೆ. ಇನ್ನೊಂದೆಡೆ, ಪಾಕಿಸ್ತಾನ ಕೂಡ ತನ್ನ ಮಿಲಿಟರಿ ವೆಚ್ಚವನ್ನು ಶೇ. 11ರಷ್ಟು ಹೆಚ್ಚಿಸಿದ್ದು, 11.9 ಶತಕೋಟಿ ಡಾಲರ್‌ನೊಂದಿಗೆ ಜಾಗತಿಕ ಪಟ್ಟಿಯಲ್ಲಿ 31ನೇ ಸ್ಥಾನದಲ್ಲಿದೆ. ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಒಟ್ಟಾರೆಯಾಗಿ ಜಾಗತಿಕ ರಕ್ಷಣಾ ವೆಚ್ಚದ ಶೇ. 51ರಷ್ಟು ಪಾಲನ್ನು ಹೊಂದಿವೆ.
ಶಸ್ತ್ರಾಸ್ತ್ರ ಆಮದು: ರಷ್ಯಾದಿಂದ ಅಂತರ, ಹೊಸ ಮಿತ್ರರತ್ತ ಒಲವು
ಶಸ್ತ್ರಾಸ್ತ್ರ ಆಮದಿನ ವಿಚಾರದಲ್ಲಿ ಭಾರತವು ತನ್ನ ದಶಕಗಳ ಹಳೆಯ ಮಿತ್ರ ರಷ್ಯಾದ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ. 2011-15ರ ಅವಧಿಯಲ್ಲಿ ಶೇ.70ರಷ್ಟಿದ್ದ ರಷ್ಯಾದ ಮೇಲಿನ ಅವಲಂಬನೆ, 2021-25ರ ವೇಳೆಗೆ ಶೇ.40ಕ್ಕೆ ಕುಸಿದಿದೆ. ಆದಾಗ್ಯೂ, ರಷ್ಯಾ ಇನ್ನೂ ಅತಿದೊಡ್ಡ ಪೂರೈಕೆದಾರನಾಗಿ ಮುಂದುವರಿದಿದೆ. ಪ್ರಸ್ತುತ ಭಾರತವು ಫ್ರಾನ್ಸ್, ಇಸ್ರೇಲ್ ಮತ್ತು ಅಮೆರಿಕದಂತಹ ದೇಶಗಳತ್ತ ಮುಖ ಮಾಡಿದ್ದು, ತನ್ನ ಆಮದು ಮೂಲಗಳನ್ನು ವೈವಿಧ್ಯಮಯಗೊಳಿಸುತ್ತಿದೆ. 2016-20 ಮತ್ತು 2021-25ರ ನಡುವೆ ಭಾರತದ ಒಟ್ಟಾರೆ ಶಸ್ತ್ರಾಸ್ತ್ರ ಆಮದು ಶೇ.4ರಷ್ಟು ಕುಸಿದಿದ್ದರೂ, ಜಾಗತಿಕ ಆಮದಿನಲ್ಲಿ ಶೇ.8.2ರಷ್ಟು ಪಾಲಿನೊಂದಿಗೆ ಭಾರತ ವಿಶ್ವದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿದೆ.
ಭವಿಷ್ಯದ ಸಿದ್ಧತೆ
2025ನೇ ವರ್ಷವು ಜಾಗತಿಕ ಮಟ್ಟದಲ್ಲಿ ಮರು-ಶಸ್ತ್ರಸಜ್ಜಿತಗೊಳ್ಳುವ ಹಂತವನ್ನು ಪ್ರತಿಬಿಂಬಿಸಿದೆ. ವಿಶ್ವದ ಒಟ್ಟು ಮಿಲಿಟರಿ ವೆಚ್ಚವು 2025ರಲ್ಲಿ 2,887 ಶತಕೋಟಿ ಡಾಲರ್‌ಗಳ ದಾಖಲೆಯ ಮಟ್ಟವನ್ನು ತಲುಪಿದ್ದು, ಇದು ಜಾಗತಿಕ ಜಿಡಿಪಿಯ ಶೇ. 2.5ರಷ್ಟಿದೆ. ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಯುರೋಪ್ ದೇಶಗಳ ರಕ್ಷಣಾ ವೆಚ್ಚ ಶೇ. 14ರಷ್ಟು ಜಿಗಿತ ಕಂಡಿದೆ.
ಭಾರತವು ಭವಿಷ್ಯದ ಸವಾಲುಗಳನ್ನು ಎದುರಿಸಲು ತನ್ನ ಸೇನೆಯ ಆಧುನೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. 2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ 7.85 ಲಕ್ಷ ಕೋಟಿ ರೂ. ಮೀಸಲಿಡಲಾಗಿದ್ದು, ಇದು ಶೇ. 15ರಷ್ಟು ಬೃಹತ್ ಏರಿಕೆಯಾಗಿದೆ. ಇದರಲ್ಲಿ 2.19 ಲಕ್ಷ ಕೋಟಿ ರೂಪಾಯಿಗಳನ್ನು ಯುದ್ಧವಿಮಾನಗಳು, ಜಲಾಂತರ್ಗಾಮಿಗಳು, ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ಕಣ್ಗಾವಲು ವ್ಯವಸ್ಥೆಗಳ ಖರೀದಿಗಾಗಿ (ಬಂಡವಾಳ ವೆಚ್ಚ) ಕಾಯ್ದಿರಿಸಲಾಗಿದೆ. ಸೇನಾ ಸನ್ನದ್ಧತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿ ಭಾರತವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಬಜೆಟ್ ಸಾರಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆಯ ನೂತನ ಕಚೇರಿ ಉದ್ಘಾಟಿಸಿದ ನಿರ್ಮಲಾ ಸೀತಾರಾಮನ್!



















