ರಾಂಚಿ: ಛತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ಸಂಜೆ ವಾಕಿಂಗ್‌ಗೆ ತೆರಳಿದ್ದ ಪದವಿ ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ಅಪಹರಿಸಿ, ಚಾಕು ತೋರಿಸಿ ಬೆದರಿಸಿದ ಬಳಿಕ ಅವರ ಮೊಬೈಲ್ ಹಾಗೂ ಯುಪಿಐ ಖಾತೆಗಳನ್ನು ಬಳಸಿಕೊಂಡು ಸುಮಾರು 1 ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಕುಟುಂಬಸ್ಥರ ಸಮಯೋಚಿತ ಅನುಮಾನದಿಂದ ಪೊಲೀಸರು ಪ್ರಾಧ್ಯಾಪಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ಜು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ರಾಯ್‌ಗಢ ಜಿಲ್ಲೆಯ ಪುಸೌರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಕೆಲಾ ಗ್ರಾಮದಲ್ಲಿ ಅಕ್ಟೋಬರ್ 5ರಂದು ಘಟನೆ ನಡೆದಿದೆ. ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಕಪೂರ್‌ಚಂದ್ ಗುಪ್ತಾ ಅವರು ಸಂಜೆ 6ರಿಂದ 7 ಗಂಟೆಯ ನಡುವೆ ದೀಪಾಪಾರಾ ಮತ್ತು ಶೋಭಾ ರೈಸ್ ಮಿಲ್ ಸಮೀಪ ವಾಕಿಂಗ್ ಮಾಡುತ್ತಿದ್ದರು. ದಣಿದಿದ್ದ ಅವರು ರಸ್ತೆಯ ಬದಿಯಲ್ಲಿದ್ದ ಕೆರೆಯ ಸಮೀಪದ ಮೈಲಿಗಲ್ಲಿನ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು.
ಈ ವೇಳೆ ಇಬ್ಬರು ವ್ಯಕ್ತಿಗಳು ಅವರ ಬಳಿಗೆ ಬಂದು, ಕೆರೆಯ ಕಡೆಗೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಕಣ್ಣುಗಳಿಗೆ ಬಟ್ಟೆ ಕಟ್ಟಿದ್ದು, ಚಾಕು ತೋರಿಸಿ ಬೆದರಿಸಿದ್ದಾರೆ. ನಂತರ ಬೈಕ್‌ನಲ್ಲಿ ಅವರನ್ನು ಭೂಪದೇವ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಡ್ರಿಪಾನಿ ಗ್ರಾಮಕ್ಕೆ ಕರೆದೊಯ್ದು, ಅಲ್ಲಿನ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಪಾಸ್‌ವರ್ಡ್ ಪಡೆದು ಯುಪಿಐ ಮೂಲಕ ಹಣ ವರ್ಗಾವಣೆ
ಅಪಹರಣಕಾರರು ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಪಾಸ್‌ವರ್ಡ್ ಹೇಳುವಂತೆ ಒತ್ತಾಯಿಸಿದ್ದಾರೆ. ಬಳಿಕ ಅವರ ಗೂಗಲ್ ಪೇ ಮತ್ತು ಭೀಮ್ ಖಾತೆಗಳಿಗೆ ಪ್ರವೇಶ ಪಡೆದಿದ್ದಾರೆ. ಹಣ ವರ್ಗಾವಣೆಗಾಗಿ ಮಹಿಳೆಯೊಬ್ಬರ ಸಂಪರ್ಕ ಪಡೆದು ಆಕೆಯ ಕ್ಯೂಆರ್ ಕೋಡ್‌ನ್ನು ಬಳಸಿಕೊಂಡು ಪ್ರಾಧ್ಯಾಪಕರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಖಾತೆಯಲ್ಲಿನ ಹಣ ವರ್ಗಾವಣೆಯ ಮಿತಿ ಸುಮಾರು 1 ಲಕ್ಷ ರೂಪಾಯಿ ತಲುಪುವವರೆಗೆ ವಹಿವಾಟು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಅಪಹರಣದ ಜತೆಗೆ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೂ ಬಳಸಿಕೊಂಡು ಹಣ ದೋಚುವ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಕುಟುಂಬಸ್ಥರ ಅನುಮಾನದಿಂದ ಆರೋಪಿಗಳ ಸಂಚು ಬಯಲು
ಪ್ರಾಧ್ಯಾಪಕರನ್ನು ಅಪಹರಿಸಿದವರು ಅನುಮಾನ ಬಾರದಂತೆ ಕುಟುಂಬಸ್ಥರಿಗೆ ಕರೆ ಮಾಡಿಸಿ ತಾವು ಸುರಕ್ಷಿತವಾಗಿರುವುದಾಗಿ ಹೇಳಿಸಿದ್ದಾರೆ. ಆದರೆ ಅವರ ಮಾತಿನ ಮೇಲೆ ಅನುಮಾನಗೊಂಡ ಕುಟುಂಬಸ್ಥರು ಸ್ವತಃ ಅವರ ಸ್ಥಳವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಈ ಹುಡುಕಾಟ ಪಾಂಡ್ರಿಪಾನಿ ಗ್ರಾಮದವರೆಗೆ ತಲುಪಿದೆ.ಕುಟುಂಬಸ್ಥರು ತಮ್ಮತ್ತ ಬರುತ್ತಿರುವುದನ್ನು ಅರಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಕೊಠಡಿಯಲ್ಲಿ ಬಂಧಿಯಾಗಿದ್ದ ಪ್ರಾಧ್ಯಾಪಕರನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬಳಿಕ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
24 ಗಂಟೆಯೊಳಗೆ ಓರ್ವ ಆರೋಪಿ ಬಂಧನ
ಮಾಹಿತಿ ಪಡೆದ ಪುಸೌರ್ ಠಾಣಾಧಿಕಾರಿ ಹರ್ಷವರ್ಧನ್ ಸಿಂಗ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಪ್ರಾಧ್ಯಾಪಕರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ರಾಯ್‌ಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಶಿ ಮೋಹನ್ ಸಿಂಗ್ ಆರೋಪಿಗಳ ಬಂಧನಕ್ಕೆ ತಕ್ಷಣ ಕಾರ್ಯಾಚರಣೆಗೆ ಸೂಚಿಸಿದ್ದಾರೆ.ತನಿಖೆ ನಡೆಸಿದ ಪೊಲೀಸರು ಜಕೆಲಾ ಗ್ರಾಮದ ನಿವಾಸಿ ಸುನಿಲ್ ಸಾರಥಿಯನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಪಹರಣ ಹಾಗೂ ಸಹಚರರೊಂದಿಗೆ ಸೇರಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವ ಸಂಚಿನಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಅವರ ಬಂಧನಕ್ಕಾಗಿ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ.
ಡಿಜಿಟಲ್ ಹಣದ ಜಾಡು ಪತ್ತೆಗೆ ತನಿಖೆ
ಪ್ರಾಧ್ಯಾಪಕರ ಖಾತೆಯಿಂದ ಹಣ ವರ್ಗಾವಣೆಗೆ ಬಳಸಲಾಗಿದೆ ಎನ್ನಲಾದ ಮಹಿಳೆಯ ಕ್ಯೂಆರ್ ಕೋಡ್ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯನ್ನು ಸಂಪರ್ಕಿಸಲಾಗಿದ್ದು, ವರ್ಗಾವಣೆಯಾದ ಹಣವನ್ನು ಸುರಕ್ಷಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಗೆ ಆರೋಪಿಗಳೊಂದಿಗೆ ಇರುವ ಸಂಬಂಧವೇನು, ಆಕೆಯ ಬ್ಯಾಂಕ್ ಖಾತೆ ಅಥವಾ ಯುಪಿಐ ಗುರುತನ್ನು ಈ ಹಿಂದೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಬಳಸಲಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಾಗಿದ್ದು, ಅಪಹರಣದಂತಹ ಸಾಂಪ್ರದಾಯಿಕ ಅಪರಾಧಗಳಿಗೆ ಈಗ ಡಿಜಿಟಲ್ ಪಾವತಿ ವ್ಯವಸ್ಥೆಯನ್ನೂ ಬಳಸಿಕೊಳ್ಳುತ್ತಿರುವ ಆತಂಕಕಾರಿ ಬೆಳವಣಿಗೆ ಈ ಪ್ರಕರಣದಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ :ಕೇವಲ 80 ರೂಪಾಯಿಗಾಗಿ ಸ್ನೇಹಿತನ ಭೀಕರ ಹತ್ಯೆ : ಹಣದಾಸೆಗೆ ಬಲಿಯಾಯ್ತು ಗೆಳೆತನ!


















