ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ (ಶೇ 0.25) ಏರಿಕೆ ಮಾಡಿದೆ. ಇದು ಗೃಹ ಸಾಲ ಮಾಡಿದವರ ತಿಂಗಳ ಇಎಂಐ ಮತ್ತು ಬಡ್ಡಿ ಹೊರೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ರಿಸರ್ವ್ ಬ್ಯಾಂಕ್ ಬಡ್ಡಿದರ ಹೆಚ್ಚಿಸುತ್ತಿದ್ದಂತೆ, ಬ್ಯಾಂಕುಗಳು ಕೂಡ ಸಾಲದ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುತ್ತವೆ. ಹಾಗಾದರೆ, 25 ಬೇಸಿಸ್ ಪಾಯಿಂಟ್ ಹೆಚ್ಚಳದಿಂದ ನಿಮ್ಮ ಇಎಂಐ ಎಷ್ಟು ಹೆಚ್ಚಳವಾಗುತ್ತದೆ ಎಂಬುದರ ಲೆಕ್ಕಾಚಾರ ಇಲ್ಲಿದೆ.
ಉದಾಹರಣೆಗೆ, ಒಬ್ಬ ವ್ಯಕ್ತಿಯು 20 ವರ್ಷಗಳ ಅವಧಿಗೆ ಶೇ 8.5 ರಷ್ಟು ಬಡ್ಡಿದರದಲ್ಲಿ 30 ಲಕ್ಷ ರೂಪಾಯಿ ಗೃಹ ಸಾಲವನ್ನು ಪಡೆದಿದ್ದರೆ, ಅವರ ಪ್ರಸ್ತುತ ಮಾಸಿಕ ಇಎಂಐ ಸುಮಾರು 26,035 ರೂಪಾಯಿ ಆಗಿರುತ್ತದೆ. ರೆಪೋ ದರ ಶೇ0.25ರಷ್ಟು ಹೆಚ್ಚಾಗಿ, ಬ್ಯಾಂಕ್ ಬಡ್ಡಿದರ ಶೇ 8.75 ಕ್ಕೆ ಏರಿಕೆಯಾದರೆ, ಹೊಸ ಇಎಂಐ ತಿಂಗಳಿಗೆ 26,511 ರೂಪಾಯಿ ಆಗುತ್ತದೆ. ಅಂದರೆ, ಮಾಸಿಕ 476 ರೂಪಾಯಿ ಹೊರೆಯಾಗುತ್ತದೆ. ವರ್ಷದ ಲೆಕ್ಕಾಚಾರದಲ್ಲಿ 5,712 ರೂಪಾಯಿಯನ್ನು ಹೆಚ್ಚುವರಿ ಪಾವತಿಸಬೇಕಾಗುತ್ತದೆ.
ಸಾಲದ ಮೊತ್ತ ದೊಡ್ಡದಿದ್ದಷ್ಟೂ ಈ ಮಾಸಿಕ ಇಎಂಐ ಹೊರೆ ಹೆಚ್ಚಾಗುತ್ತದೆ. ಉದಾಹರಣೆಗೆ, 50 ಲಕ್ಷ ರೂಪಾಯಿ ಸಾಲದ ಮೇಲೆ 25 ಬೇಸಿಸ್ ಪಾಯಿಂಟ್ ಏರಿಕೆಯಾಗಿರುವುದರಿಂದ ಮಾಸಿಕ ಇಎಂಐ ಸುಮಾರು 793 ರೂಪಾಯಿ ಹೆಚ್ಚಾಗಲಿದೆ. ಹೀಗೆ ಸಾಲದ ಮೊತ್ತವು ಜಾಸ್ತಿಯಾದಂತೆಲ್ಲ ಇಎಂಐ ಮೊತ್ತವು ಜಾಸ್ತಿಯಾಗುತ್ತದೆ. ಮೂರೂವರೆ ವರ್ಷಗಳ ಬಳಿಕ ಆರ್ ಬಿಐ ರೆಪೋ ದರ ಏರಿಕೆ ಮಾಡಿರುವುದು ಸಾಲಗಾರರಿಗೆ ಹೊರೆಯಾಗಿದೆ.
ಬ್ಯಾಂಕುಗಳು ಸಾಲಗಾರರಿಗೆ ಇಎಂಐ ಮೊತ್ತವನ್ನು ಹೆಚ್ಚಿಸುವ ಬದಲಿಗೆ ಸಾಲದ ಅವಧಿಯನ್ನು ವಿಸ್ತರಿಸುವ ಆಯ್ಕೆಯನ್ನು ಕೂಡ ನೀಡುತ್ತವೆ. ಆದರೆ ಇದರಿಂದ ಸಾಲದ ಒಟ್ಟು ಬಡ್ಡಿ ವೆಚ್ಚ ಮತ್ತಷ್ಟು ಹೆಚ್ಚಾಗುತ್ತದೆ. ಸಾಲಗಾರರು ತಮ್ಮ ಮಾಸಿಕ ಬಜೆಟ್ ಅನ್ನು ನಿರ್ವಹಿಸಲು ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ :ಹಾಲಿಗೆ ಡಿಟರ್ಜೆಂಟ್, ಎಮಲ್ಸಿಫೈಯರ್ ಬೆರೆಸಿ ಮಾರಾಟ? ಭಾರೀ ಕಲಬೆರಕೆ ಜಾಲ ಬಯಲು!


















