ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಸದಸ್ಯರಿಗೆ ಪಿಎಫ್, ಪಿಂಚಣಿ ಮಾತ್ರವಲ್ಲ, ವಿಮಾ ಸೌಲಭ್ಯವೂ ಇದೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಹಾಗಾಗಿ, ಇಪಿಎಫ್ಒ ಈಗ ಜೀವ ವಿಮಾ ಯೋಜನೆಯ ಬಗ್ಗೆ ಸದಸ್ಯರಿಗೆ ಜಾಗೃತಿ ಮೂಡಿಸುತ್ತಿದೆ. ಹೌದು, ಪಿಎಫ್ ಸದಸ್ಯರಿಗೆ 7 ಲಕ್ಷ ರೂಪಾಯಿವರೆಗೆ ಜೀವ ವಿಮಾ ಸೌಲಭ್ಯ ಇರುತ್ತದೆ. ಉದ್ಯೋಗಿಗಳು ಯಾವುದೇ ಪ್ರೀಮಿಯಂ ಕಟ್ಟದಿದ್ದರೂ ವಿಮಾ ಸೌಲಭ್ಯವನ್ನು ನೀಡಲಾಗುತ್ತದೆ.
ಜೀವ ವಿಮೆಗಾಗಿ ಉದ್ಯೋಗಿ ಯಾವುದೇ ಪ್ರತ್ಯೇಕ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. ಉದ್ಯೋಗದಾತರು ಅಥವಾ ಕಂಪನಿಗಳು ಮಾತ್ರ ಅಲ್ಪ ಮೊತ್ತವನ್ನು ಪ್ರೀಮಿಯಂ ಆಗಿ ಪಾವತಿಸುತ್ತವೆ. ಇಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬ ಸಕ್ರಿಯ ಸದಸ್ಯರೂ ಈ ವಿಮೆಗೆ ಅರ್ಹರಾಗಿದ್ದಾರೆ. ಇಪಿಎಫ್ಒ ಸದಸ್ಯರಿಗೆ ನೀಡುವ ‘ಎಂಪ್ಲಾಯೀಸ್ ಡೆಪಾಸಿಟ್ ಲಿಂಕ್ಡ್ ಇನ್ಶುರೆನ್ಸ್’ (EDLI) ಯೋಜನೆಯಡಿ 7 ಲಕ್ಷ ರೂಪಾಯಿವರೆಗೆ ಉಚಿತ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ.
ಇಪಿಎಫ್ ಸದಸ್ಯರಾಗಿರುವ ಉದ್ಯೋಗಿಯು ಆಕಸ್ಮಿಕವಾಗಿ ಮರಣ ಹೊಂದಿದರೆ, ಆತನ ಕುಟುಂಬಸ್ಥರಿಗೆ 7 ಲಕ್ಷ ರೂಪಾಯಿ ನೀಡಲಾಗುತ್ತದೆ. ಆದರೆ, ಮರಣ ಹೊಂದುವ ಸಂದರ್ಭದಲ್ಲಿ ಉದ್ಯೋಗಿಯು ಸೇವೆಯಲ್ಲಿರಬೇಕು. ಅಂದರೆ, ಕನಿಷ್ಠ 12 ತಿಂಗಳ ಕಾಲ ಸತತವಾಗಿ ಇಪಿಎಫ್ ಚಂದಾದಾರರಾಗಿರಬೇಕು. ಅವರಿಗೆ ಉಚಿತವಾಗಿ ವಿಮಾ ಸೌಲಭ್ಯ ಇರುತ್ತದೆ.
ಪ್ರತಿಯೊಬ್ಬ ಇಪಿಎಫ್ ಸದಸ್ಯರು ತಮ್ಮ ಇಪಿಎಫ್ ಖಾತೆಗೆ ಕಡ್ಡಾಯವಾಗಿ ‘ನಾಮಿನಿ’ ಹೆಸರನ್ನು ನೋಂದಾಯಿಸಿರಬೇಕು. ನಾಮಿನೇಷನ್ ಇಲ್ಲದಿದ್ದಲ್ಲಿ ಕ್ಲೇಮ್ ಪ್ರಕ್ರಿಯೆಯು ವಿಳಂಬವಾಗಬಹುದು ಅಥವಾ ತೊಂದರೆಯಾಗಬಹುದು. ದುರದೃಷ್ಟವಶಾತ್ ಉದ್ಯೋಗಿ ಮರಣ ಹೊಂದಿದರೆ, ಅವರ ನಾಮಿನಿ ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳು ‘ಫಾರ್ಮ್ 5IF’ ಅನ್ನು ಭರ್ತಿ ಮಾಡಿ ಇಪಿಎಫ್ಒ ಕಚೇರಿಗೆ ಸಲ್ಲಿಸುವ ಮೂಲಕ ವಿಮಾ ಹಣವನ್ನು ಪಡೆಯಬಹುದು. ಈ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕವೂ ನಿರ್ವಹಿಸಬಹುದಾಗಿದೆ.
ಇದನ್ನೂ ಓದಿ : ಮಾಸ್ಟರ್ ಡಿಗ್ರಿ ಮುಗಿಸಿದವರಿಗೆ ಗುಡ್ ನ್ಯೂಸ್ : ಕೇಂದ್ರ ಸರ್ಕಾರದ NABARD ಸಂಸ್ಥೆಯಲ್ಲಿ ನೇಮಕಾತಿ!



















