ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ದಿನೇ ದಿನೇ ಅಪಾಯಕಾರಿ ಮಟ್ಟಕ್ಕೆ ಕುಸಿಯುತ್ತಿದ್ದು, ಆತಂಕ ಎದುರಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 95 ಅಡಿಗೆ ಇಳಿಕೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೈಕೊಟ್ಟಿರುವುದರಿಂದ ಜಲಾಶಯಕ್ಕೆ ಕೇವಲ 618 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹಾಗೂ ಇತರ ಅಗತ್ಯಗಳಿಗಾಗಿ ನದಿಗೆ ಬರೋಬ್ಬರಿ 4,375 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಒಳಹರಿವಿಗಿಂತ ಹೊರಹರಿವು ಏಳು ಪಟ್ಟು ಹೆಚ್ಚಾಗಿರುವ ಕಾರಣ ಜಲಾಶಯದ ನೀರಿನ ಸಂಗ್ರಹ ವೇಗವಾಗಿ ಕರಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ ಒಟ್ಟು 19.222 ಟಿಎಂಸಿ ನೀರು ಸಂಗ್ರಹವಿದೆ. ಹೀಗಾಗಿ ಕುಡಿಯುವ ನೀರು ಮತ್ತು ಇನ್ನಿತರ ಅಗತ್ಯ ಬಳಕೆಗಾಗಿ ಕೇವಲ 12 ಟಿಎಂಸಿ ನೀರು ಮಾತ್ರ ಲಭ್ಯವಿದೆ.















