ನವದೆಹಲಿ: ದೇಶದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉದ್ಯಮವನ್ನು ಬಲಪಡಿಸುವ ನಿಟ್ಟಿನಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 11,000 ಕೋಟಿ ರೂ. ಮೊತ್ತದ ಮಹತ್ವದ ಯೋಜನೆಗೆ ಅನುಮೋದನೆ ನೀಡಿದೆ. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಅಡಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ದೇಶೀಯ ಉತ್ಪಾದನಾ ವ್ಯವಸ್ಥೆಗೆ ಹೊಸ ವೇಗ ನೀಡಲಿದೆ.
ಸಂಪುಟದ ಈ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಈ ಯೋಜನೆಯು ದೇಶದ ನಿರ್ಮಾಣ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಿದೆ ಎಂದು ತಿಳಿಸಿದ್ದಾರೆ. ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು, ಸ್ಥಳೀಯಕರಣಕ್ಕೆ ವೇಗ ನೀಡುವುದು, ಸುಧಾರಿತ ತಂತ್ರಜ್ಞಾನ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ವಿದೇಶಿ ಆಮದು ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಎಂಟು ವರ್ಷಗಳ ಅವಧಿಯ ಯೋಜನೆ;10,515ಕೋಟಿ ರೂ. ಪ್ರೋತ್ಸಾಹಧನ
2026-27ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿದ್ದ ಈ ಯೋಜನೆಯ ಒಟ್ಟು ಆರ್ಥಿಕ ವೆಚ್ಚ 11,000 ಕೋಟಿ ರೂಪಾಯಿಯಾಗಿದ್ದು , ಮುಂದಿನ ಎಂಟು ವರ್ಷಗಳ ಅವಧಿಯಲ್ಲಿ ಜಾರಿಯಾಗಲಿದೆ. ಇದರ ಅಡಿಯಲ್ಲಿ ದೇಶೀಯ ಉತ್ಪಾದಕರಿಗೆ ಮಾರಾಟ ಆಧಾರಿತ ಪ್ರೋತ್ಸಾಹಧನ (ಸೇಲ್ಸ್-ಲಿಂಕ್ಡ್ ಇನ್ಸೆಂಟಿವ್ಸ್) ವಿತರಿಸಲು 10,515 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ರಸ್ತೆ, ರೈಲ್ವೆ, ಮೆಟ್ರೋ ಜಾಲ, ವಿಮಾನ ನಿಲ್ದಾಣ, ಬಂದರು, ಗಣಿಗಾರಿಕೆ, ಜಲಸಂಪನ್ಮೂಲ ಮತ್ತು ಇಂಧನ ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯವಿರುವ ಅತ್ಯಾಧುನಿಕ ಯಂತ್ರೋಪಕರಣಗಳ ಬೇಡಿಕೆಯನ್ನು ಪೂರೈಸಲು ಈ ಯೋಜನೆಯನ್ನು ರೂಪಿಸಲಾಗಿದೆ.
ಆಮದು ಅವಲಂಬನೆ ತಗ್ಗಿಸಿ ಜಾಗತಿಕ ಉತ್ಪಾದನಾ ಕೇಂದ್ರವಾಗುವ ಗುರಿ
ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಮಾರುಕಟ್ಟೆಯಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಚೀನಾದಲ್ಲಿ ಶೇ. 95 ಮತ್ತು ಜಪಾನ್ನಲ್ಲಿ ಶೇ. 85 ರಷ್ಟು ದೇಶೀಯ ಉತ್ಪಾದನಾ ಪಾಲು ಇದ್ದರೆ, ಭಾರತದಲ್ಲಿ ಸರಾಸರಿ ಶೇ. 50 ರಷ್ಟು ಮಾತ್ರ ದೇಶೀಯ ಉತ್ಪಾದನೆ ಇದೆ ಎಂದು ಕುಮಾರಸ್ವಾಮಿ ವಿವರಿಸಿದರು. ದೇಶದಲ್ಲಿ ದೊಡ್ಡ ಮಟ್ಟದ ಬೇಡಿಕೆಯಿದ್ದರೂ ಸುಧಾರಿತ ತಂತ್ರಜ್ಞಾನ ಮತ್ತು ಬಿಡಿಭಾಗಗಳ ಉತ್ಪಾದನೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ಅಗತ್ಯವಿದೆ. ಪ್ರಧಾನಮಂತ್ರಿಗಳ ದೂರದೃಷ್ಟಿಯಂತೆ ರೂಪುಗೊಂಡಿರುವ ಈ ಯೋಜನೆಯು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಿಸಲು ನೆರವಾಗಲಿದೆ ಎಂದರು.
ಯಾವೆಲ್ಲಾ ಯಂತ್ರೋಪಕರಣಗಳ ಉತ್ಪಾದನೆಗೆ ಉತ್ತೇಜನ?
ದೇಶದಲ್ಲಿ ಮೆಟ್ರೋ ರೈಲು ಯೋಜನೆಗಳು, ರಾಷ್ಟ್ರೀಯ ಹೆದ್ದಾರಿಗಳು, ಸುರಂಗ ಮಾರ್ಗಗಳು, ಬಂದರು ಮತ್ತು ಗಣಿಗಾರಿಕೆ ಚಟುವಟಿಕೆಗಳು ವೇಗವಾಗಿ ವಿಸ್ತರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಗೆಯುವ ಯಂತ್ರಗಳು (ಎಕ್ಸ್ಕಾವೇಟರ್ಗಳು), ಸುರಂಗ ಕೊರೆಯುವ ಯಂತ್ರಗಳು (ಟಿಬಿಎಂ), ಕ್ರೇನ್ಗಳು, ಲೋಡರ್ಗಳು, ಎಂಜಿನ್ಗಳು, ಹೈಡ್ರಾಲಿಕ್ ವ್ಯವಸ್ಥೆಗಳು ಮತ್ತು ಟ್ರಾನ್ಸ್ಮಿಷನ್ಗಳಂತಹ ಪ್ರಮುಖ ಉಪಕರಣಗಳು ಹಾಗೂ ಬಿಡಿಭಾಗಗಳ ದೇಶೀಯ ಉತ್ಪಾದನೆಗೆ ಈ ಯೋಜನೆಯಡಿ ಪ್ರೋತ್ಸಾಹ ನೀಡಲಾಗುತ್ತದೆ. ಇದರಿಂದ ನಿರ್ಮಾಣ ವೆಚ್ಚವನ್ನು ನಿಯಂತ್ರಿಸುವುದರ ಜೊತೆಗೆ ದೇಶದ ತಾಂತ್ರಿಕ ಸಾಮರ್ಥ್ಯವೂ ಬಲಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
“ನಿರ್ಮಾಣ ಮತ್ತು ಉತ್ಪಾದನಾ ಉಪಕರಣಗಳನ್ನು ಉತ್ತೇಜಿಸಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಈ ಯೋಜನೆಯು ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಲಿದೆ. ಎಲ್ಲಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಮೂಲಸೌಕರ್ಯ ವಲಯದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪವಾಗಿದೆ. ಈ ಆಶಯಕ್ಕೆ ಅನುಗುಣವಾಗಿ ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ.”
- ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು


















