ಚೆನ್ನೈ : ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಮೂರು ವರ್ಷದ ಹೆಣ್ಣುಮಗುವೊಂದರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಕೊಲೆ ಮಾಡಿರುವ ಅತ್ಯಂತ ಭೀಕರ ಘಟನೆ ಬೆಳಕಿಗೆ ಬಂದಿದೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದು, ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಿಹಾರ ಮೂಲದ ವಲಸೆ ಕಾರ್ಮಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತಪಟ್ಟ ಮಗುವಿನ ಕುಟುಂಬವೂ ಬಿಹಾರ ಮೂಲದ್ದಾಗಿದ್ದು, ತಿರುವಳ್ಳೂರು ಜಿಲ್ಲೆಯ ಗುಮ್ಮಿಡಿಪೂಂಡಿ ಸಿಪ್ಕೋಟ್ (SIPCOT) ಕೈಗಾರಿಕಾ ಪ್ರದೇಶದಲ್ಲಿ ವಾಸವಾಗಿತ್ತು. ಆರೋಪಿ ಕೂಡ ಇದೇ ಭಾಗದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ ಮಗು ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ, ಮಗುವಿಗೆ ಪರಿಚಿತನಾಗಿದ್ದ ಆರೋಪಿಯು ಬಿಸ್ಕೆಟ್ ಕೊಡುವುದಾಗಿ ಆಮಿಷವೊಡ್ಡಿ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯದ ಬಳಿಕ ಆರೋಪಿಯು ಮಗುವನ್ನು ಪೊದೆಗಳ ನಡುವೆ ಕೈಬಿಟ್ಟು ಪರಾರಿಯಾಗಿದ್ದ. ಶೌಚಕ್ಕಾಗಿ ತೆರಳಿದ್ದ ಸ್ಥಳೀಯ ಮಹಿಳೆಯೊಬ್ಬರು ಮಗುವನ್ನು ಗುರುತಿಸಿ, ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಗು ಕೊನೆಯುಸಿರೆಳೆದಿದೆ.
ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಕೃತ್ಯದಲ್ಲಿ ಹಲವರು ಭಾಗಿಯಾಗಿದ್ದಾರೆ ಎಂಬ ಸಂಶಯದ ಮೇಲೆ ಮತ್ತಿಬ್ಬರ ಮೇಲೂ ಹಲ್ಲೆ ನಡೆಸಲಾಗಿತ್ತು. ಆದರೆ ಪೊಲೀಸರು ಇದನ್ನು ಸಾಮೂಹಿಕ ಅತ್ಯಾಚಾರವಲ್ಲ ಎಂದು ಸ್ಪಷ್ಟಪಡಿಸಿದ್ದು, ಘಟನೆಯಲ್ಲಿ ಕೇವಲ ಒಬ್ಬನೇ ಆರೋಪಿ ಭಾಗಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮಗುವಿನ ಸಾವಿನ ಹಿನ್ನೆಲೆಯಲ್ಲಿ ಈಗ ಕೊಲೆ ಪ್ರಕರಣವನ್ನೂ ಸೇರಿಸಿಕೊಳ್ಳಲು ಮುಂದಾಗಿದ್ದಾರೆ.
ರಾಜಕೀಯ ವಾಕ್ಸಮರ
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿ. ಜೋಸೆಫ್ ವಿಜಯ್ ಅವರು ಮಹಿಳೆಯರ ರಕ್ಷಣೆಗಾಗಿ ‘ಸಿಂಗಪ್ಪೆಣ್ಣು’ ಎಂಬ ವಿಶೇಷ ರಕ್ಷಣಾ ಪಡೆಯನ್ನು ಅಧಿಕೃತವಾಗಿ ಚಾಲನೆಗೊಳಿಸಿದ್ದರು. ಇದರ ಬೆನ್ನಲ್ಲೇ ಈ ಭೀಕರ ಘಟನೆ ನಡೆದಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ವಿಷಯವಾಗಿ ಆಡಳಿತರೂಢ ಟಿವಿಕೆ (TVK) ವಿರುದ್ಧ ವಾಗ್ದಾಳಿ ನಡೆಸಿರುವ ಡಿಎಂಕೆ (DMK) ನಾಯಕ ಟಿ.ಕೆ.ಎಸ್. ಇಳಂಗೋವನ್, ಇಂತಹ ಅಪರಾಧ ಎಸಗುವವರಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸರ್ಕಾರವು ಸಾಮಾಜಿಕ ಸುರಕ್ಷತೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಆಧಾರ್ ಸಂಖ್ಯೆ ಬಳಸಿ ನಿಮ್ಮ ಖಾತೆಯ ಹಣವನ್ನು ವಂಚಕರು ಕದಿಯಬಹುದಾ? ಪ್ರಾಧಿಕಾರ ಹೇಳೋದಿಷ್ಟು!


















