ಬೆಂಗಳೂರು: ಪಿಂಚಣಿದಾರರ ವಾರ್ಷಿಕ ಜೀವನ ಪ್ರಮಾಣಪತ್ರ (Annual Life Certificate) ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರಿ ಪಿಂಚಣಿದಾರರು, ಬ್ಯಾಂಕ್ ಪಿಂಚಣಿದಾರರು ಹಾಗೂ ಸಂಬಂಧಪಟ್ಟ ಇತರ ಪಿಂಚಣಿದಾರರು ತಮ್ಮ ಮಾಸಿಕ ಪಿಂಚಣಿಯು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲು ಈ ಗಡುವಿನೊಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ನಿಗದಿತ ಅವಧಿಯೊಳಗೆ ಪ್ರಮಾಣಪತ್ರ ಸಲ್ಲಿಸದಿದ್ದರೆ ತಾತ್ಕಾಲಿಕವಾಗಿ ಪಿಂಚಣಿ ಪಾವತಿ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ. ಪ್ರಮಾಣಪತ್ರ ಸಲ್ಲಿಸಿದ ನಂತರ ಬಾಕಿ ಮೊತ್ತವನ್ನು (Arrears) ಪಾವತಿಸಲಾಗುತ್ತದೆ. ಪಿಂಚಣಿದಾರರು ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸಬಹುದು.
ಅಗತ್ಯವಿರುವ ದಾಖಲೆಗಳು
• ಆಧಾರ್ ಸಂಖ್ಯೆ (ಮತ್ತು ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ)
• ಪಿಂಚಣಿ ಪಾವತಿ ಆದೇಶ ಸಂಖ್ಯೆ (PPO Number)
• ಪಿಂಚಣಿ ಜಮೆಯಾಗುವ ಬ್ಯಾಂಕ್ ಖಾತೆ ವಿವರ ಹಾಗೂ ಪಿಂಚಣಿ ವಿತರಣಾ ಸಂಸ್ಥೆಯ ಹೆಸರು
- ಆನ್ ಲೈನ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವ ವಿಧಾನ
ಫೇಸ್ ಅಥೆಂಟಿಕೇಷನ್ ಆ್ಯಪ್ ಮೂಲಕ
• ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ AadhaarFaceRD ಮತ್ತು Jeevan Pramaan Face App ಡೌನ್ ಲೋಡ್ ಮಾಡಿ.
• ಆ್ಯಪ್ ತೆರೆದು ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ OTP ಮೂಲಕ ಪರಿಶೀಲಿಸಿ.
• ಪಿಪಿಒ ಸಂಖ್ಯೆ, ಬ್ಯಾಂಕ್ ಮತ್ತು ಪಿಂಚಣಿ ವಿತರಣಾ ಸಂಸ್ಥೆಯ ವಿವರಗಳನ್ನು ಭರ್ತಿ ಮಾಡಿ.
• ಮೊಬೈಲ್ ಮುಂಭಾಗದ ಕ್ಯಾಮೆರಾ ಬಳಸಿ ಮುಖದ ಸ್ಕ್ಯಾನ್ ಪೂರ್ಣಗೊಳಿಸಿ.
• ಪ್ರಕ್ರಿಯೆ ಯಶಸ್ವಿಯಾದ ನಂತರ Pramaan ID ಸಹಿತ SMS ಬರುತ್ತದೆ. ಅಧಿಕೃತ ಜೀವನ ಪ್ರಮಾಣ ಪೋರ್ಟಲ್ ನಲ್ಲಿ ಇದನ್ನು ಬಳಸಿ ಪ್ರಮಾಣಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದು. - ಬಯೋಮೆಟ್ರಿಕ್ (ಫಿಂಗರ್ ಪ್ರಿಂಟ್ / ಐರಿಸ್) ಮೂಲಕ
ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ನಲ್ಲಿ ಮಾನ್ಯತೆ ಪಡೆದ ಬಯೋಮೆಟ್ರಿಕ್ ಸಾಧನದ ಮೂಲಕ ಆಧಾರ್ ದೃಢೀಕರಣ ನಡೆಸಿ ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸಬಹುದು. (EPS-95 ಪಿಂಚಣಿದಾರರು UMANG ಆ್ಯಪ್ ಮೂಲಕವೂ ಸಲ್ಲಿಸಬಹುದು). - ಆಫ್ ಲೈನ್ ಮತ್ತು ಮನೆ ಬಾಗಿಲಿನ ಸೇವೆ ವಿಧಾನಗಳು
• ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿ: ಪಿಂಚಣಿ ಖಾತೆ ಇರುವ ಬ್ಯಾಂಕ್ ಶಾಖೆಗೆ ನೇರವಾಗಿ ತೆರಳಿ ಭೌತಿಕ ಜೀವನ ಪ್ರಮಾಣಪತ್ರ (Physical Life Certificate) ಸಲ್ಲಿಸಬಹುದು ಅಥವಾ ಬ್ಯಾಂಕ್/ ಅಂಚೆ ಕಚೇರಿ/ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC) ಬಯೋಮೆಟ್ರಿಕ್ ಮೂಲಕ ಡಿಜಿಟಲ್ ಪ್ರಮಾಣಪತ್ರ ಪಡೆಯಬಹುದು.
• ಅಧಿಕೃತ ಅಧಿಕಾರಿಗಳ ಸಹಿ: ಖುದ್ದಾಗಿ ಬ್ಯಾಂಕಿಗೆ ತೆರಳಲು ಸಾಧ್ಯವಾಗದ ಸಂದರ್ಭದಲ್ಲಿ ಗೆಜೆಟೆಡ್ ಅಧಿಕಾರಿ, ಬ್ಯಾಂಕ್ ಅಧಿಕಾರಿ ಅಥವಾ ನಿಗದಿತ ಅಧಿಕಾರಿಗಳಿಂದ ದೃಢೀಕರಿಸಿದ ಭೌತಿಕ ಫಾರ್ಮ್ ಅನ್ನು ಬೇರೆಯವರ ಮೂಲಕ ಬ್ಯಾಂಕ್ಗೆ ಸಲ್ಲಿಸುವ ಅವಕಾಶವಿದೆ.
• ಮನೆ ಬಾಗಿಲಿಗೆ ಸೇವೆ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮೂಲಕ ಮನೆ ಬಾಗಿಲಲ್ಲೇ ಡಿಜಿಟಲ್ ಪ್ರಮಾಣಪತ್ರ ಪಡೆಯಲು 155299 ಸಂಖ್ಯೆಗೆ ಕರೆ ಮಾಡಬಹುದು ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು. ಸಾರ್ವಜನಿಕ ವಲಯದ ಬ್ಯಾಂಕುಗಳ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆಗಾಗಿ 9152220220 ಗೆ ಕರೆ ಮಾಡಬಹುದು.


















