ಬೆಂಗಳೂರು: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ, ಇದಾದ ಬಳಿಕ ಸುಮಾರು ಶೇ.30ರಷ್ಟು ಕುಸಿದು ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ತಲುಪಿದ್ದ ಚಿನ್ನದ ದರದಲ್ಲಿ ಮತ್ತೆ ಏರಿಕೆಯಾಗಿದೆ. ಸೋಮವಾರ ಶೇ.1.47ರಷ್ಟು ಏರಿಕೆ ಕಂಡಿರುವ ಚಿನ್ನದ ಬೆಲೆಯು 10 ಗ್ರಾಂಗೆ 1.27 ಲಕ್ಷ ರೂ. ಆಗಿದೆ. ಇದರ ಬೆನ್ನಲ್ಲೇ, ಚಿನ್ನದ ಬೆಲೆಯು 10 ಗ್ರಾಂಗೆ 1 ಲಕ್ಷ ರೂ.ಗಿಂತ ಕಡಿಮೆಯಾಗಲಿದೆ ಎಂಬ ಲೆಕ್ಕಾಚಾರ, ವಿಶ್ಲೇಷಣೆಗಳು ಕೇಳಿಬರುತ್ತಿವೆ. ಹಾಗೆಯೇ, ಚಿನ್ನದ ಬೆಲೆಗಳು ಮುಂದೇನಾಗಲಿವೆ ಎಂಬುದನ್ನು 3 ದಿನಗಳು ನಿರ್ಣಯಿಸಲಿವೆ.
ಹೌದು, ಮುಂದಿನ 20 ದಿನಗಳಲ್ಲಿ ಬರುವ ಅಂದರೆ, ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ದಿನಾಂಕಗಳು ಚಿನ್ನದ ದರದ ದಿಕ್ಕನ್ನು ನಿರ್ಧರಿಸಲಿವೆ. ಅಮೆರಿಕದ ಡಾಲರ್ ಮೌಲ್ಯ ಮತ್ತು ಅಮೆರಿಕ ಬಾಂಡ್ ಮೇಲಿನ ಆದಾಯಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಡಾಲರ್ ಬಲಗೊಂಡರೆ ಹಾಗೂ ಬಾಂಡ್ ಬಡ್ಡಿದರ ಹೆಚ್ಚಾದರೆ ಚಿನ್ನದ ಬೇಡಿಕೆ ತಗ್ಗಿ ಬೆಲೆ ಇಳಿಯುತ್ತದೆ.
ಪ್ರಮುಖ ದಿನಾಂಕಗಳ ಮಹತ್ವ
- ನವೆಂಬರ್ 25 (PCE ಹಣದುಬ್ಬರ ದತ್ತಾಂಶ): ಅಮೆರಿಕದ ಅಕ್ಟೋಬರ್ ತಿಂಗಳ ಪಿಸಿಇ ಹಣದುಬ್ಬರ ವರದಿ ಬಿಡುಗಡೆಯಾಗಲಿದೆ. ಸೆಪ್ಟೆಂಬರ್ ನಲ್ಲಿ ಶೇ. 3.6ರಷ್ಟಿದ್ದ ಹಣದುಬ್ಬರ ಶೇ. 3.8ಕ್ಕೆ ಏರುವ ಅಂದಾಜಿದೆ. ಹಣದುಬ್ಬರ ಹೆಚ್ಚಾದರೆ ಬಡ್ಡಿದರ ಏರಿಕೆಯ ಭೀತಿಯಿಂದ ಚಿನ್ನದ ಬೆಲೆ ಇಳಿಯಬಹುದು.
- ಡಿಸೆಂಬರ್ 4 (ಉದ್ಯೋಗ ದತ್ತಾಂಶ): ಅಮೆರಿಕದ ಉದ್ಯೋಗ ಬೆಳವಣಿಗೆ ಮತ್ತು ನಿರುದ್ಯೋಗ ದರದ ವರದಿ ಪ್ರಕಟವಾಗಲಿದೆ. ನಿರುದ್ಯೋಗ ಕಡಿಮೆಯಿದ್ದು ಉದ್ಯೋಗ ಸೃಷ್ಟಿ ಹೆಚ್ಚಿದ್ದರೆ, ಹಣದುಬ್ಬರ ನಿಯಂತ್ರಿಸಲು ಫೆಡರಲ್ ರಿಸರ್ವ್ ಬಡ್ಡಿದರ ಏರಿಸುವ ಸಾಧ್ಯತೆ ಹೆಚ್ಚಾಗುತ್ತದೆ.
- ಡಿಸೆಂಬರ್ 9 (ಫೆಡರಲ್ ರಿಸರ್ವ್ ನಿರ್ಧಾರ): ಅಮೆರಿಕದ ಕೇಂದ್ರೀಯ ಬ್ಯಾಂಕ್ ಅಧ್ಯಕ್ಷ ಕೆವಿನ್ ವಾರ್ಷ್ ಬಡ್ಡಿದರ ಏರಿಕೆಯ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ತಜ್ಞರ ಪ್ರಕಾರ 25 ರಿಂದ 50 ಬೇಸಿಸ್ ಪಾಯಿಂಟ್ ಗಳಷ್ಟು ಬಡ್ಡಿದರ ಹೆಚ್ಚಾಗುವ ನಿರೀಕ್ಷೆಯಿದ್ದು, ಇದು ಬಾಂಡ್ ಆದಾಯ ಹೆಚ್ಚಿಸಿ ಚಿನ್ನದ ಬೆಲೆಯನ್ನು ತಾತ್ಕಾಲಿಕವಾಗಿ ತಗ್ಗಿಸಬಹುದು.
ಈಗ ಖರೀದಿಸಬಹುದೇ?
ತಾತ್ಕಾಲಿಕ ಏರಿಳಿತಗಳ ನಡುವೆಯೂ, ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳ ನಿರಂತರ ಚಿನ್ನದ ಖರೀದಿಯಿಂದ ದೀರ್ಘಾವಧಿಯಲ್ಲಿ ಬೆಲೆ ಏರಿಕೆಯಾಗಲಿದೆ. 2027ರ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್ ಗೆ 4,650 ಡಾಲರ್ ಆಗಬಹುದು ಎಂದು ಗೋಲ್ಡ್ ಮನ್ ಸ್ಯಾಚ್ಸ್ ಅಂದಾಜಿಸಿದೆ. ಮದುವೆ ಮತ್ತು ಗೃಹ ಬಳಕೆಗೆ ಚಿನ್ನ ಖರೀದಿಸುವವರಿಗೆ ಇದು ಉತ್ತಮ ಸಮಯವಾಗಿದ್ದು, ಹೂಡಿಕೆದಾರರು ಒಂದೇ ಬಾರಿಗೆ ಹಣ ಹೂಡುವ ಬದಲು ಕಂತುಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.


















