ಬೆಂಗಳೂರು: ಕರ್ನಾಟಕ ಕೇಡರ್ಗೆ ನಿಯೋಜನೆಗೊಂಡಿರುವ 2025ನೇ ಬ್ಯಾಚ್ನ (78ನೇ ಆರ್ಆರ್) ಐವರು ನೂತನ ಐಪಿಎಸ್ ಪ್ರೊಬೇಷನರಿ ಅಧಿಕಾರಿಗಳು ಗುರುವಾರ ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾದರು. ಸಂಪ್ರೀತ್ ಸಂತೋಷ್, ರಾಹುಲ್ ಸಿ. ಯರಂತೇಲಿ, ಸೌಭಾಗ್ಯ ಎಸ್. ಬೀಳಗಿಮಠ, ಅಭಿನವ್ ಶರ್ಮಾ ಹಾಗೂ ಅಭಿಲಾಷ್ ಸುಂದರಂ ಅವರು ಮುಖ್ಯ ಕಾರ್ಯದರ್ಶಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ
ನೂತನ ಅಧಿಕಾರಿಗಳನ್ನು ಕರ್ನಾಟಕ ಕೇಡರ್ಗೆ ಸ್ವಾಗತಿಸಿದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಾರ್ವಜನಿಕ ಸೇವೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮೊದಲ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಸಾರ್ವಜನಿಕರ ಕುಂದುಕೊರತೆಗಳಿಗೆ ಸಹಾನುಭೂತಿ ಹಾಗೂ ಸಂವೇದನಾಶೀಲತೆಯಿಂದ ಸ್ಪಂದಿಸಬೇಕು. ಆಡಳಿತದಲ್ಲಿ ವೇಗವಾಗಿ ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನ ಮತ್ತು ನವೀನ ಆಲೋಚನೆಗಳಿಗೆ ತಕ್ಕಂತೆ ಅಧಿಕಾರಿಗಳು ನಿರಂತರವಾಗಿ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು ಎಂದು ಅವರು ಮಾರ್ಗದರ್ಶನ ನೀಡಿದರು.
ಕನ್ನಡ ಕಲಿಕೆಯ ಮಹತ್ವ ಹಾಗೂ ಪುಸ್ತಕಗಳ ಕೊಡುಗೆ
ಸಾರ್ವಜನಿಕರೊಂದಿಗೆ ಪರಿಣಾಮಕಾರಿಯಾಗಿ ಬೆರೆಯಲು ಮತ್ತು ಸ್ಥಳೀಯ ಜನರ ಭಾವನೆಗಳನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಕನ್ನಡ ಭಾಷೆಯನ್ನು ಕಲಿಯುವುದು ಅತ್ಯಗತ್ಯ ಎಂದು ಮುಖ್ಯ ಕಾರ್ಯದರ್ಶಿಯವರು ಒತ್ತಿ ಹೇಳಿದರು. ಇದೇ ವೇಳೆ, ನಿಯೋಜನೆಗೊಂಡಿರುವ ಐವರು ಐಪಿಎಸ್ ಪ್ರೊಬೇಷನರ್ಗಳ ಪೈಕಿ ಮೂವರು ಕರ್ನಾಟಕದವರೇ ಆಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಭೇಟಿಯ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಯವರು ಎಲ್ಲ ಐವರು ಪ್ರೊಬೇಷನರ್ಗಳಿಗೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು. ವಿಶೇಷವಾಗಿ, ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ತಾವೇ ರಚಿಸಿರುವ ‘ಸುಸ್ಥಿರ ಬದುಕಿನ ಆಶಾಕಿರಣ’ ಕೃತಿಯನ್ನು ಮಂಡ್ಯ ಮೂಲದ ಪ್ರೊಬೇಷನರಿ ಅಧಿಕಾರಿ ಸಂಪ್ರೀತ್ ಸಂತೋಷ್ ಅವರಿಗೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧಿಕಾರಿಗಳು, ರಾಜ್ಯದಲ್ಲಿ ಜನಪರ, ಪಾರದರ್ಶಕ ಹಾಗೂ ದಕ್ಷ ಪೊಲೀಸ್ ಸೇವೆ ಸಲ್ಲಿಸುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.


















