ನವದೆಹಲಿ: ಅಸ್ಸಾಂನ ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿರುವ ಹಾಲಿ ರಕ್ಷಣಾ ವಲಯದ ಸಿವಿಲ್ ಎನ್ಕ್ಲೇವ್ನ ಕಾರ್ಯಾಚರಣೆ ಮತ್ತು ಸ್ಥಳಾವಕಾಶದ ತೀವ್ರ ಮಿತಿಗಳನ್ನು ನಿವಾರಿಸಲು ಹಾಗೂ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ಸಿಲ್ಚಾರ್ನ ಡೊಲೂ (Doloo) ಎಂಬಲ್ಲಿ ಹೊಸ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಮೂಲಕ ಅಂದಾಜು 2,014 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಒಪ್ಪಿಗೆ ಸೂಚಿಸಿದೆ.
ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿರುವ ಡೊಲೂ, ಬರಾಕ್ ಕಣಿವೆಯ ಕಾರ್ಯತಂತ್ರದ ಕೇಂದ್ರಬಿಂದುವಾಗಿದೆ. ಈ ಪ್ರದೇಶವು ತನ್ನ ವಿಶಾಲವಾದ ಚಹಾ ತೋಟಗಳು, ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಪರಿಸರ ಹಾಗೂ ಸಾಂಸ್ಕೃತಿಕ ಪ್ರವಾಸೋದ್ಯಮದ ಅಪಾರ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಹೊಸ ವಿಮಾನ ನಿಲ್ದಾಣದ ನಿರ್ಮಾಣದಿಂದ ಈ ಭಾಗದ ವಾಣಿಜ್ಯ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ವೇಗ ದೊರೆಯಲಿದೆ.
ಆಧುನಿಕ ಟರ್ಮಿನಲ್ ಮತ್ತು ರನ್ವೇ ಮೂಲಸೌಕರ್ಯ
ಪ್ರಸ್ತಾವಿತ ಹೊಸ ಟರ್ಮಿನಲ್ ಕಟ್ಟಡವು ಒಟ್ಟು 12,351 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರಲಿದ್ದು, ಜನದಟ್ಟಣೆಯ ಅವಧಿಯಲ್ಲಿ 800 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಆಧುನಿಕ ಪ್ರಯಾಣಿಕರ ಸೌಲಭ್ಯಗಳು, ಪರಿಸರ ಸ್ನೇಹಿ ಹಸಿರು ಕಟ್ಟಡ ತತ್ವಗಳು ಮತ್ತು ಭವಿಷ್ಯದಲ್ಲಿ ವಿಸ್ತರಿಸಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ, ಎ-320 (A-320) ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಸೂಕ್ತವಾದ 2,705 ಮೀಟರ್ ಉದ್ದ ಮತ್ತು 45 ಮೀಟರ್ ಅಗಲದ ‘ಕೋಡ್-4ಸಿ’ ರನ್ವೇ, ಏಕಕಾಲಕ್ಕೆ 6 ಎ-320 ವಿಮಾನಗಳನ್ನು ನಿಲುಗಡೆ ಮಾಡಬಹುದಾದ ಹೊಸ ಏಪ್ರನ್ (Apron) ಹಾಗೂ ಪ್ರತ್ಯೇಕ ಐಸೋಲೇಷನ್ ಬೇ ನಿರ್ಮಾಣವೂ ಈ ಯೋಜನೆಯಲ್ಲಿ ಸೇರಿದೆ.
ಈಶಾನ್ಯ ಭಾರತದ ಸಂಪರ್ಕಕ್ಕೆ ಹೊಸ ಹೆಬ್ಬಾಗಿಲು
ಅತ್ಯಂತ ಕಾರ್ಯತಂತ್ರದ ಮಹತ್ವವನ್ನು ಹೊಂದಿರುವ ಡೊಲೂ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವು ದಕ್ಷಿಣ ಅಸ್ಸಾಂ ಮತ್ತು ನೆರೆಯ ರಾಜ್ಯಗಳ ಗಡಿ ಭಾಗಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ವಾಯು ಸಂಚಾರದ ಬೇಡಿಕೆಯನ್ನು ಪೂರೈಸಲಿದೆ. ಇದು ಹಾಲಿ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಗಣನೀಯವಾಗಿ ತಗ್ಗಿಸುವುದರ ಜೊತೆಗೆ, ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಸಾಮರ್ಥ್ಯವನ್ನು ಅನಾವರಣಗೊಳಿಸಲಿದೆ. ಅಲ್ಲದೆ, ಈಶಾನ್ಯ ಭಾರತವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಗತಿ ಕಾರಿಡಾರ್ಗಳೊಂದಿಗೆ ಬೆಸೆಯುವ ವಿಶ್ವದರ್ಜೆಯ ಹೆಬ್ಬಾಗಿಲಾಗಿ ಇದು ಕಾರ್ಯನಿರ್ವಹಿಸಲಿದೆ.



















