ಪಾಟಲೀಪುತ್ರ : ಬಿಹಾರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಅಭ್ಯರ್ಥಿಗಳ ಆಕ್ರೋಶ ಭುಗಿಲೆದ್ದಿದ್ದು ಪಾಟಲೀಪುತ್ರ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಭೀಕರ ಹಿಂಸಾಚಾರ ನಡೆದಿದೆ. ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸೂಕ್ತ ರೈಲು ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಸಾವಿರಾರು ಅಭ್ಯರ್ಥಿಗಳು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಉದ್ರಿಕ್ತ ಗುಂಪು ಕಲ್ಲು ತೂರಾಟ ಮತ್ತು ರೈಲು ಧ್ವಂಸಕ್ಕೆ ಮುಂದಾದಾಗ, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ. ಇದರಿಂದಾಗಿ ಗಂಟೆಗಳ ಕಾಲ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ರೈಲು ಕೊರತೆಯಿಂದ ಭುಗಿಲೆದ್ದ ಆಕ್ರೋಶ
ಭಾನುವಾರ ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಯು ಎರಡು ಶಿಫ್ಟ್‌ಗಳಲ್ಲಿ ನಡೆಯಬೇಕಾಗಿದ್ದರಿಂದ, ಶನಿವಾರ ರಾತ್ರಿಯೇ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಅಭ್ಯರ್ಥಿಗಳು ಪಾಟಲೀಪುತ್ರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯ ಅಭ್ಯರ್ಥಿಗಳಿಗೆ ತಕ್ಕಂತೆ ವಿಶೇಷ ರೈಲುಗಳ ವ್ಯವಸ್ಥೆಯನ್ನು ಸರ್ಕಾರ ಮಾಡಿರಲಿಲ್ಲ ಎನ್ನಲಾಗಿದೆ. ಪಾಟಲೀಪುತ್ರದಿಂದ ಕತಿಹಾರ್‌ಗೆ ಹೊರಡಬೇಕಿದ್ದ ಪರೀಕ್ಷಾ ವಿಶೇಷ ರೈಲನ್ನು ಹತ್ತಲು ಅಭ್ಯರ್ಥಿಗಳು ಮುಗಿಬಿದ್ದಾಗ ಭಾರಿ ಗೊಂದಲ ಮತ್ತು ಕಾಲ್ತುಳಿತದ ವಾತಾವರಣ ನಿರ್ಮಾಣವಾಯಿತು. ಇದರಿಂದ ಕೋಪಗೊಂಡ ಅಭ್ಯರ್ಥಿಗಳು ರೈಲು ಹಳಿಗಳ ಮೇಲೆ ಜಿಗಿದು, ರೈಲನ್ನು ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು.
ಐಜಿ ಸೇರಿದಂತೆ ಅಧಿಕಾರಿಗಳಿಗೆ ಗಾಯ
ಪ್ರತಿಭಟನೆಯು ಕ್ಷಣಾರ್ಧದಲ್ಲೇ ಹಿಂಸಾಚಾರಕ್ಕೆ ತಿರುಗಿದ್ದು, ಉದ್ರಿಕ್ತ ಅಭ್ಯರ್ಥಿಗಳು ಪರೀಕ್ಷಾ ವಿಶೇಷ ರೈಲಿನ ಬೋಗಿಗಳನ್ನು ಧ್ವಂಸಗೊಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ದಾನಾಪುರ ಉಪವಿಭಾಗಾಧಿಕಾರಿ (SDM), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಐಜಿ ಜಿತೇಂದ್ರ ರಾಣಾ ಅವರು ಭಾರಿ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿ ಹಳಿಗಳಲ್ಲಿದ್ದವರನ್ನು ಚದುರಿಸಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದ ಸಂದರ್ಭದಲ್ಲಿ ಐಜಿ ಜಿತೇಂದ್ರ ರಾಣಾ ಹಾಗೂ ರೂಪಾಸ್‌ಪುರ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರಿಂದ ಗಾಳಿಯಲ್ಲಿ ಗುಂಡು, ಅಶ್ರುವಾಯು ದಾಳಿ
ಅಧಿಕಾರಿಗಳ ಮನವಿಗೆ ಮಣಿಯದ ಅಭ್ಯರ್ಥಿಗಳು ಘೋಷಣೆಗಳನ್ನು ಕೂಗುತ್ತಾ ರೈಲು ಹಳಿ ಬಿಟ್ಟು ಕದಲದಿದ್ದಾಗ, ಪರಿಸ್ಥಿತಿ ಕೈಮೀರಿ ಹೋದ ಕಾರಣ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾದರು. ಜನಸಮೂಹವನ್ನು ಚದುರಿಸಲು ಪೊಲೀಸರು ಮೊದಲು ಲಾಠಿಚಾರ್ಜ್ ನಡೆಸಿ, ಅಶ್ರುವಾಯು ಸಿಡಿಸಿದರು. ಆದರೂ ಪರಿಸ್ಥಿತಿ ಹತೋಟಿಗೆ ಬಾರದಿದ್ದಾಗ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಉದ್ರಿಕ್ತರನ್ನು ಚದುರಿಸಿದರು. ಗುಂಡಿನ ಸದ್ದಿನ ಬಳಿಕ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.
ಹೆಚ್ಚುವರಿ ಭದ್ರತೆ, ಪರ್ಯಾಯ ರೈಲು ವ್ಯವಸ್ಥೆ
ಹಿಂಸಾಚಾರದ ಹಿನ್ನೆಲೆಯಲ್ಲಿ ಪಾಟಲೀಪುತ್ರ ರೈಲ್ವೆ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಸತತ ಪ್ರಯತ್ನದ ನಂತರ, ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸುರಕ್ಷಿತವಾಗಿ ತಲುಪಿಸಲು ತರಾತುರಿಯಲ್ಲಿ ಹೆಚ್ಚುವರಿ ವಿಶೇಷ ರೈಲುಗಳು ಹಾಗೂ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಮಾಡಲಾಯಿತು. ತಡರಾತ್ರಿಯ ಬಳಿಕ ಹಳಿಗಳನ್ನು ಮುಕ್ತಗೊಳಿಸಿ ರೈಲು ಸಂಚಾರವನ್ನು ಯಥಾಸ್ಥಿತಿಗೆ ತರಲಾಗಿದೆ.
ಇದನ್ನೂ ಓದಿ : TMC ಆಂತರಿಕ ಬೇಗುದಿ : ದೀದಿಗೆ ಬಂಡಾಯ ಸಂಸದೆ ಕಾಕೋಲಿ ದಸ್ತಿದಾರ್ ಪುತ್ರನಿಂದ ಕಾನೂನು ನೋಟಿಸ್!


















