ಬೆಂಗಳೂರು : ಬೆಂಗಳೂರು ಎಚ್‌ಎಎಲ್ ಪೊಲೀಸ್ ಠಾಣೆಯ ಅಧಿಕಾರಿಗಳು ರಾಜಸ್ಥಾನದ ಜೈಪುರದಲ್ಲಿ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸಲು ಎಚ್‌ಎಎಲ್ ಠಾಣೆಯ ಪಿಎಸ್‌ಐ ಅನಿತಾ, ಹೆಡ್ ಕಾನ್ಸ್‌ಟೇಬಲ್ ಉಳುವಪ್ಪ ಹಾಗೂ ಕಾನ್ಸ್‌ಟೇಬಲ್ ಯತೀಶ್ ಕಳೆದ ಶುಕ್ರವಾರ ಜೈಪುರಕ್ಕೆ ತೆರಳಿದ್ದರು. ಈ ಮುವರೂ ಬಂಧನ ಪ್ರಕ್ರಿಯೆ ವೇಳೆ ಆರೋಪಿಯಿಂದ 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತ ದೂರು ಹಿನ್ನೆಲೆ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪಿಎಸ್‌ಐ ಅನಿತಾ, ಹೆಡ್ ಕಾನ್ಸ್‌ಟೇಬಲ್ ಉಳುವಪ್ಪ ಹಾಗೂ ಕಾನ್ಸ್‌ಟೇಬಲ್ ಯತೀಶ್‌ಗೆ ಬಲೆ ಬೀಸಿದ್ದರು.
ಆರೋಪಿಯಿಂದ 40 ಸಾವಿರ ಹಣ ಪಡೆಯುವ ವೇಳೆ ಪಿಎಸ್‌ಐ ಅನಿತಾ ಸೇರಿದಂತೆ ಮೂವರು ಪೊಲೀಸರು ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ರಾಜಸ್ಥಾನ ಎಸಿಬಿಯ ಎಎಸ್‌ಪಿ ಭೂಪೇಂದ್ರ ಚೌಧರಿ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆದಿದ್ದು, ಬಳಿಕ ಬೆಂಗಳೂರು ಪೊಲೀಸರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಘಟನೆ ಕುರಿತು ಜೈಪುರ ಎಸಿಬಿ ಅಧಿಕಾರಿಗಳು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ. ಆರೋಪಿ ಬಂಧನಕ್ಕೆ ತೆರಳಿದ್ದ ಪೊಲೀಸ್ ತಂಡವೇ ಲಂಚ ಪ್ರಕರಣದಲ್ಲಿ ಸಿಲುಕಿರುವುದು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ಎಸಿಬಿ ಅಧಿಕಾರಿಗಳು ಎಲ್ಲಾ ಆಯಾಮಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : TMC ಆಂತರಿಕ ಬೇಗುದಿ : ದೀದಿಗೆ ಬಂಡಾಯ ಸಂಸದೆ ಕಾಕೋಲಿ ದಸ್ತಿದಾರ್ ಪುತ್ರನಿಂದ ಕಾನೂನು ನೋಟಿಸ್!



















