ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಇಂದಿನಿಂದ ಮೂರು ದಿನಗಳ ಕಾಲ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆ ಬಿಡದಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಸಾಗಲಿದೆ.
ಇಂದು ಬೆಳಗ್ಗೆ 9 ಗಂಟೆಗೆ ಭೈರಮಂಗಲದಿಂದ ಪಾದಯಾತ್ರೆ ಆರಂಭವಾಗಲಿದ್ದು, ಮೈತ್ರಿ ಪಕ್ಷ ಬಿಜೆಪಿ ನಾಯಕರೂ ಜೆಡಿಎಸ್ ಹೋರಾಟಕ್ಕೆ ಸಾಥ್ ನೀಡಲಿದ್ದಾರೆ. ಪಾದಯಾತ್ರೆಯನ್ನು ಹೆಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಉದ್ಘಾಟಿಸಲಿದ್ದಾರೆ. ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮೊದಲ ದಿನವಾದ ಇಂದು ಬೆಳಗ್ಗೆ 9 ಗಂಟೆಗೆ ಭೈರಮಂಗಲದಿಂದ ಪಾದಯಾತ್ರೆ ಆರಂಭವಾಗಲಿದೆ. ತಿಮ್ಮನಗೌಡನ ದೊಡ್ಡಿ, ವೃಷಭಾವತಿ ಪುರ, ಅಬ್ಬನಕುಪ್ಪೆ, ಜೋಗರದೊಡ್ಡಿ ಮೂಲಕ ಪಾದಯಾತ್ರೆ ಸಾಗಲಿದ್ದು, ಜೋಗರದೊಡ್ಡಿಯಲ್ಲಿ ಮಧ್ಯಾಹ್ನ ಊಟ ಹಾಗೂ ವಿಶ್ರಾಂತಿ ಇರಲಿದೆ. ಬಳಿಕ ಮೇಡನಹಳ್ಳಿ, ಬೈರಮಂಗಲ ಕ್ರಾಸ್, ಬಿಜಿಎಸ್ ವೃತ್ತ ಮಾರ್ಗವಾಗಿ ಬಿಡದಿ ತಲುಪಲಿದೆ. ಬಿಡದಿಯ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಮೊದಲ ದಿನದ ಪಾದಯಾತ್ರೆಯ ನಂತರ ರಾತ್ರಿ ವಾಸ್ತವ್ಯ ಮಾಡಲಾಗುತ್ತದೆ.
ಎರಡನೇ ದಿನವಾದ ಆಗಸ್ಟ್ 10ರಂದು ಬಿಡದಿ ಬಿಜಿಎಸ್ ವೃತ್ತದಿಂದ ಪಾದಯಾತ್ರೆ ಆರಂಭವಾಗಲಿದೆ. ಭೈರಮಂಗಲ ಕ್ರಾಸ್, ಬಿಲ್ಲಕೆಂಪಹಳ್ಳಿ ಗೇಟ್, ಬಂಗ್ಲೆ, ಈಗಲ್‌ಟನ್ ಕ್ರಾಸ್, ಲಕ್ಷ್ಮೀ ಸಾಗರ, ಆಂಜನೇಯ ಸ್ವಾಮಿ ದೇವಸ್ಥಾನ, ಮಂಚನಾಯಕನಹಳ್ಳಿ ಹಾಗೂ ವಂಡರ್ಲಾ ಗೇಟ್ ಮೂಲಕ ಸಾಗಲಿದೆ. ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಮಧ್ಯಾಹ್ನ ಊಟ ಹಾಗೂ ವಿಶ್ರಾಂತಿ ಇರಲಿದ್ದು, ಬಳಿಕ SVT ಕಾಲೋನಿ, ಹೆಜ್ಜಾಲ, ಕಣಿಮಿಣಿಕೆ ಟೋಲ್ ಪ್ಲಾಜಾ, ಎಂ. ಸಿರಿ ಕನ್ವೆನ್ಷನ್ ಹಾಲ್ ಮೂಲಕ ಕುಂಬಳಗೋಡು ತಲುಪಲಿದೆ. ನಂತರ ದೊಡ್ಡ ಆಲದಮರ ಕ್ರಾಸ್, ರಾಮೋಹಳ್ಳಿ, ಅಂಚೆಪಾಳ್ಯ, ಚಲ್ಲಘಟ್ಟ ಮಾರ್ಗವಾಗಿ ಮೈಸೂರು ರಸ್ತೆ–ನೈಸ್ ಜಂಕ್ಷನ್ ತಲುಪಲಿದೆ. ಜೆಕೆ ಗ್ರ್ಯಾಂಡ್‌ನಲ್ಲಿ ರಾತ್ರಿ ವಾಸ್ತವ್ಯ ಮಾಡಲಾಗುತ್ತದೆ.
ಮೂರನೇ ಹಾಗೂ ಅಂತಿಮ ದಿನವಾದ ಆಗಸ್ಟ್ 11ರಂದು ಮೈಸೂರು ರಸ್ತೆ–ನೈಸ್ ಜಂಕ್ಷನ್‌ನಿಂದ ಪಾದಯಾತ್ರೆ ಆರಂಭವಾಗಲಿದೆ. ಆರ್.ಆರ್.ನಗರ ಆರ್ಚ್, ನಾಯಂಡಹಳ್ಳಿ ವೃತ್ತ, ಶಿರಸಿ ಸರ್ಕಲ್, ಗೂಡ್ಸ್ ಶೆಡ್ ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಪಾದಯಾತ್ರೆ ಸಾಗಲಿದೆ. ಅಂತಿಮವಾಗಿ ಫ್ರೀಡಂ ಪಾರ್ಕ್‌ನಲ್ಲಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಮೂರು ದಿನಗಳ ಈ ಪಾದಯಾತ್ರೆಯ ಮೂಲಕ ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸರ್ಕಾರವನ್ನು ಕಟ್ಟಿಹಾಕಲು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.
ಇದನ್ನೂ ಓದಿ : ರಾಕಿ ಬಳಗಕ್ಕೆ ಯಶ್ ‘ರಾಕಿಂಗ್’ ಗಿಫ್ಟ್.. ‘ಟಾಕ್ಸಿಕ್’ ಬಗ್ಗೆ ಇದೇ ಮೊದಲ ಬಾರಿ ಅಣ್ತಮ್ಮನ ಸ್ಪಷ್ಟ ಮಾತು!



















