ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಮುಂದುವರಿದಿದೆ. ಸಾಲ ನೀಡಲು ನಿರಾಕರಿಸಿದ್ದ ಕಾರಣಕ್ಕೆ ಬೇಕರಿ ಮಾಲೀಕನ ಮೇಲೆ ಪುಡಿ ರೌಡಿಗಳ ಗುಂಪು ರಕ್ತ ಬವರುವಂತೆ ಹಲ್ಲೆ ನಡೆಸಿರುವ ಘಟನೆ ಆರ್.ಟಿ.ನಗರದಲ್ಲಿ ನಡೆದಿದೆ. ಈ ಘಟನೆಯ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಂದ್ರಶೇಖರ್ ಶೆಟ್ಟಿ ಹಾಗೂ ರೂಪಾ ಶೆಟ್ಟಿ ದಂಪತಿಗೆ ಸೇರಿದ ಮಂಜುನಾಥ ಕಾಂಡಿಮೆಂಟ್ಸ್‌ನಲ್ಲಿ ಈ ಘಟನೆ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಪುಂಡರು ಸಾಲ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಸಾಲ ನೀಡಲು ಮಾಲೀಕರ ನಿರಾಕರಿಸಿದ ಬಳಿಕ, ಮತ್ತೆ ಪುಡಿ ರೌಡಿಗಳ ಗುಂಪು ಕಟ್ಟಿಕೊಂಡು ಬಂದು ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿ ಬೇಕರಿ ಮಾಲೀಕನಿಗೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ವೇಳೆ ಅಂಗಡಿಯಲ್ಲಿದ್ದ ಸಾಮಾನುಗಳನ್ನೂ ಪುಡಿ ರೌಡಿಗಳು ಧ್ವಂಸಗೊಳಿಸಿದ್ದಾರೆ.
ಗಾಯಗೊಂಡ ಅಂಗಡಿ ಮಾಲೀಕರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಕಾಂಡಿಮೆಂಟ್ಸ್ ಮಾಲೀಕರು ದೂರು ದಾಖಲಿಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮ ಅಂತ್ಯಕ್ರಿಯೆ!


















