ಹಾಸನ : ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಲಿದೆ. ಮಧ್ಯಾಹ್ನ 2 ಗಂಟೆ ನಂತರ ಹರದನಹಳ್ಳಿ ಬಳಿಯ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿರುವ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಮುಗಿದಿವೆ. ಅಂತ್ಯಕ್ರಿಯೆ ಸ್ಥಳದಲ್ಲಿ ಬೃಹತ್ ಜರ್ಮನ್ ಟೆಂಟ್ ನಿರ್ಮಿಸಲಾಗಿದ್ದು, ಮೂವತ್ತು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನ ವಾಸ್ತು ತಜ್ಞ ಹರಿಪ್ರಸಾದ್ ವಾಸ್ತು ಪ್ರಕಾರ ಜಾಗ ಗುರುತು ಮಾಡಿದ್ದು, ಮಧ್ಯಾಹ್ನ ಎರಡು ಗಂಟೆ ನಂತರ ಬೆಂಗಳೂರಿನ ಜೆ.ಪಿ ನಗರದ ಕನಕಗಿರಿ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆಯಲಿದೆ. ಅದರಂತೆ 4:30ರೊಳಗೆ ಅಂತ್ಯಕ್ರಿಯೆ ನೆರವೇರಲಿಸಲು ನಿರ್ಧರಿಸಲಾಗಿದೆ.
ಮಡಿಲಕ್ಕಿ ತುಂಬಿ ಮುತ್ತೈದೆ ಶಾಸ್ತ್ರ ಮಾಡಿದ ಗ್ರಾಮಸ್ಥರು :
ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಮುಂಜಾನೆ 4:45ರ ಸುಮಾರಿಗೆ ಹೊಳೆನರಸೀಪುರದ ರೇವಣ್ಣ ಮನೆಗೆ ತರಲಾಯಿತು. ಇದಕ್ಕೂ ಮುನ್ನ ಚೆನ್ನಮ್ಮ ಮೃತದೇಹವನ್ನು ಹುಟ್ಟೂರು ಮುತ್ತಿಗೆಹಿರಿಹಳ್ಳಿಗೂ ಕೊಂಡೊಯ್ಯಲಾಯಿತು. ಈ ವೇಳೆ ಗ್ರಾಮಸ್ಥರು ಚೆನ್ನಮ್ಮಗೆ ಮುತ್ತೈದೆ ಮಡಿಲು ತುಂಬಿಸುವ ಶಾಸ್ತ್ರ ಮಾಡಿದರು. ಮೃತದೇಹಕ್ಕೆ ಹೂವಿನ ಹಾರ ಹಾಕಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಇನ್ನು ರೇವಣ್ಣ ಮನೆಗೆ ಚೆನ್ನಮ್ಮ ಪಾರ್ಥಿವ ಶರೀರ ತರುತ್ತಿದ್ದಂತೆ ಸೊಸೆ ಭವಾನಿ ರೇವಣ್ಣ ಮೃತದೇಹಕ್ಕೆ ಆರತಿ ಮಾಡಿದರು. ಬಳಿಕ ಮನೆಯೊಳಗೆ ಚೆನ್ನಮ್ಮ ಮೃತದೇಹವನ್ನು ಕೊಂಡೊಯ್ಯಲಾಯಿತು. ಮನೆಯೊಳಗೆ ಕುಟುಂಬಸ್ಥರ ಪೂಜೆ ಬಳಿಕ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ಇದನ್ನೂ ಓದಿ : ಚೆನ್ನಮ್ಮ ನಿಧನ – ಎರಡು ದಿನ ಹಾಸನ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ!


















