ಢಾಕಾ : ಬಾಂಗ್ಲಾದೇಶದ ಪ್ರಮುಖ ಟಿ20 ಫ್ರಾಂಚೈಸಿ ಟೂರ್ನಿಯಾದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ಈ ವರ್ಷ ನಡೆಯದಿರುವ ಅನಿಶ್ಚಿತತೆಯ ನಡುವೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ದೇಶೀಯ ಕ್ರಿಕೆಟಿಗರಿಗೆ ಭರ್ಜರಿ ವೇತನ ಹೆಚ್ಚಳ ಘೋಷಿಸಿದೆ. ಪುರುಷರು ಮಾತ್ರವಲ್ಲದೆ ಮಹಿಳಾ ಕ್ರಿಕೆಟಿಗರಿಗೂ ಪಂದ್ಯ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಕೆಲವು ವಿಭಾಗಗಳಲ್ಲಿ ವೇತನವನ್ನು ನೇರವಾಗಿ ಎರಡು ಪಟ್ಟು ಮಾಡಲಾಗಿದೆ.
ಬಿಪಿಎಲ್ ಬಾಂಗ್ಲಾದೇಶದ ಸ್ಥಳೀಯ ಕ್ರಿಕೆಟಿಗರಿಗೆ ಹೆಚ್ಚುವರಿ ಆದಾಯದ ಪ್ರಮುಖ ಮೂಲವಾಗಿತ್ತು. ಆದರೆ ಹಣಕಾಸು ಸೇರಿದಂತೆ ಹಲವು ಕಾರಣಗಳಿಂದ ಈ ವರ್ಷದ ಟೂರ್ನಿ ನಡೆಯುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದೇಶೀಯ ಕ್ರಿಕೆಟಿಗರ ಆದಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಎದುರಾಗಿತ್ತು. ಇದೇ ಹಿನ್ನೆಲೆಯಲ್ಲಿ ಬಿಸಿಬಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರಥಮ ದರ್ಜೆ ಪಂದ್ಯಕ್ಕೆ 1.5 ಲಕ್ಷ ರೂಪಾಯಿ
ಹೊಸ ವೇತನ ವ್ಯವಸ್ಥೆಯ ಪ್ರಕಾರ, ಬಾಂಗ್ಲಾದೇಶದ ಪುರುಷ ಕ್ರಿಕೆಟಿಗರಿಗೆ ಪ್ರಥಮ ದರ್ಜೆ ಪಂದ್ಯವೊಂದಕ್ಕೆ ಇನ್ನು ಮುಂದೆ 1.5 ಲಕ್ಷ ಬಾಂಗ್ಲಾದೇಶಿ ಟಕಾ ಸಿಗಲಿದೆ. ಈ ಮೊದಲು ಆಟಗಾರರಿಗೆ 70 ಸಾವಿರ ಟಕಾ ಪಂದ್ಯ ಶುಲ್ಕ ನೀಡಲಾಗುತ್ತಿತ್ತು. ಅಂದರೆ ಪಂದ್ಯ ಶುಲ್ಕದಲ್ಲಿ ಗಮನಾರ್ಹ ಏರಿಕೆ ಮಾಡಲಾಗಿದೆ.
ಇದೇ ರೀತಿ ಲಿಸ್ಟ್ ಎ ಪಂದ್ಯಗಳಿಗೂ ದೊಡ್ಡ ಪ್ರಮಾಣದಲ್ಲಿ ಶುಲ್ಕ ಹೆಚ್ಚಿಸಲಾಗಿದೆ. ಈ ಹಿಂದೆ ಒಂದು ಲಿಸ್ಟ್ ಎ ಪಂದ್ಯಕ್ಕೆ 50 ಸಾವಿರ ಟಕಾ ನೀಡಲಾಗುತ್ತಿತ್ತು. ಇದೀಗ ಅದನ್ನು ಒಂದು ಲಕ್ಷ ಟಕಾಗೆ ಹೆಚ್ಚಿಸಲಾಗಿದೆ. ದೇಶೀಯ ಟಿ20 ಪಂದ್ಯಗಳಲ್ಲಿಯೂ ಆಟಗಾರರಿಗೆ ಸಿಗುವ ಮೊತ್ತವನ್ನು ಎರಡು ಪಟ್ಟು ಮಾಡಲಾಗಿದೆ. ಈ ಮೊದಲು 40 ಸಾವಿರ ಟಕಾ ಪಡೆಯುತ್ತಿದ್ದ ಆಟಗಾರರು ಇನ್ನು ಮುಂದೆ ಪ್ರತಿ ಪಂದ್ಯಕ್ಕೆ 80 ಸಾವಿರ ಟಕಾ ಪಡೆಯಲಿದ್ದಾರೆ. ಹೀಗಾಗಿ ಬಾಂಗ್ಲಾದೇಶದ ದೇಶೀಯ ಪುರುಷ ಕ್ರಿಕೆಟ್‌ನಲ್ಲಿ ಪ್ರಥಮ ದರ್ಜೆ, ಲಿಸ್ಟ್ ಎ ಹಾಗೂ ಟಿ20—ಮೂರು ಪ್ರಮುಖ ಸ್ವರೂಪಗಳಲ್ಲೂ ಆಟಗಾರರ ಪಂದ್ಯ ಶುಲ್ಕ ಗಣನೀಯವಾಗಿ ಹೆಚ್ಚಾಗಿದೆ.
ಮಹಿಳಾ ಕ್ರಿಕೆಟಿಗರಿಗೂ ವೇತನ ಹೆಚ್ಚಳ
BCB ಪುರುಷ ಕ್ರಿಕೆಟಿಗರಿಗೆ ಮಾತ್ರ ಸೀಮಿತವಾಗದೆ ಮಹಿಳಾ ಕ್ರಿಕೆಟಿಗರಿಗೂ ಹೊಸ ವೇತನ ವ್ಯವಸ್ಥೆ ಜಾರಿಗೆ ತಂದಿದೆ. ಮಹಿಳೆಯರ ನಾಲ್ಕು ದಿನಗಳ ಪಂದ್ಯಕ್ಕೆ ಈ ಹಿಂದೆ 20 ಸಾವಿರ ಟಕಾ ನೀಡಲಾಗುತ್ತಿತ್ತು. ಇದೀಗ ಅದನ್ನು 40 ಸಾವಿರ ಟಕಾಗೆ ಹೆಚ್ಚಿಸಲಾಗಿದೆ. ಮಹಿಳೆಯರ ಏಕದಿನ ಪಂದ್ಯಗಳ ಪಂದ್ಯ ಶುಲ್ಕವೂ 15 ಸಾವಿರದಿಂದ 30 ಸಾವಿರ ಟಕಾಗೆ ಏರಿಕೆಯಾಗಿದೆ. ಟಿ20 ಪಂದ್ಯಗಳಿಗೆ ನೀಡಲಾಗುತ್ತಿದ್ದ 10 ಸಾವಿರ ಟಕಾವನ್ನು ಇದೀಗ 20 ಸಾವಿರ ಟಕಾಗೆ ಹೆಚ್ಚಿಸಲಾಗಿದೆ. ಅಂದರೆ ಮಹಿಳಾ ಕ್ರಿಕೆಟ್‌ನಲ್ಲಿಯೂ ಪ್ರಮುಖ ಮೂರು ಮಾದರಿಗಳ ಪಂದ್ಯ ಶುಲ್ಕವನ್ನು ಎರಡು ಪಟ್ಟು ಮಾಡಲಾಗಿದೆ.
ಇದರ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಆಟಗಾರರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸುವ ಪ್ರಯತ್ನವನ್ನು ಮಾಡಿದೆ.
ಆಟಗಾರರಿಗೆ ಹೊಡೆತ
ಈ ವೇತನ ಹೆಚ್ಚಳದ ಹಿಂದೆ ಪ್ರಮುಖ ಕಾರಣ BPL ಈ ವರ್ಷ ನಡೆಯದಿರುವುದು. ಬಾಂಗ್ಲಾದೇಶದ ಸ್ಥಳೀಯ ಕ್ರಿಕೆಟಿಗರಿಗೆ BPL ಕೇವಲ ಪ್ರತಿಷ್ಠೆಯ ಟಿ20 ಟೂರ್ನಿ ಮಾತ್ರವಲ್ಲ, ಆದಾಯ ಗಳಿಸುವ ಅತ್ಯಂತ ಪ್ರಮುಖ ವೇದಿಕೆಯೂ ಆಗಿದೆ. BPLನಲ್ಲಿ ಸಾಮಾನ್ಯವಾಗಿ 50ರಿಂದ 70ರಷ್ಟು ಸ್ಥಳೀಯ ಆಟಗಾರರಿಗೆ ಅವಕಾಶ ಸಿಗುತ್ತದೆ. ಆದರೆ ದೇಶೀಯ ಪ್ರಥಮ ದರ್ಜೆ, ಲಿಸ್ಟ್ ಎ ಮತ್ತು ಟಿ20 ಕ್ರಿಕೆಟ್‌ನಲ್ಲಿ ಸುಮಾರು 150ರಿಂದ 200 ಆಟಗಾರರು ತೊಡಗಿಸಿಕೊಂಡಿರುತ್ತಾರೆ. ಹೀಗಾಗಿ BPL ರದ್ದಾದರೆ ಕೇವಲ ಕೆಲವೇ ಆಟಗಾರರ ಮೇಲೆ ಪರಿಣಾಮ ಬೀರುವುದಿಲ್ಲ; ದೊಡ್ಡ ಸಂಖ್ಯೆಯ ದೇಶೀಯ ಕ್ರಿಕೆಟಿಗರ ಆದಾಯದ ಮೇಲೂ ಅದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು BCB ಮುಖ್ಯಸ್ಥ ತಮೀಮ್ ಇಕ್ಬಾಲ್ ವಿವರಿಸಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ CONCOR ಸಂಸ್ಥೆಯಲ್ಲಿ 77 ಹುದ್ದೆಗಳ ನೇಮಕಾತಿ : 1.6 ಲಕ್ಷ ರೂ. ಸಂಬಳ



















