ಬೆಂಗಳೂರು : ಭಾರತದ ಆಡಿಯೊ ಸಾಧನಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಗಳಿಸಿರುವ ಮಿವಿ ಇದೀಗ ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಪ್ರವೇಶಿಸಲು ಸಜ್ಜಾಗಿದೆ. ಕಂಪನಿಯ ಮೊದಲ ಸ್ಮಾರ್ಟ್‌ಫೋನ್ Mivi One 5G ಸೆಪ್ಟೆಂಬರ್ 24ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. 5ಜಿ ಸಂಪರ್ಕ, ಕ್ವಾಲ್ಕಾಮ್‌ನ ಸ್ನ್ಯಾಪ್‌ಡ್ರ್ಯಾಗನ್ ಮೊಬೈಲ್ ವೇದಿಕೆ ಹಾಗೂ ಭಾರತದಲ್ಲೇ ತಯಾರಿಕೆ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರವೇಶಿಸಲಿದೆ.
ಹೈದರಾಬಾದ್ ಮೂಲದ ಮಿವಿ ಸಂಸ್ಥೆ ಇದುವರೆಗೆ ವೈರ್‌ಲೆಸ್ ಇಯರ್‌ಫೋನ್‌ಗಳು, ಸ್ಪೀಕರ್‌ಗಳು ಸೇರಿದಂತೆ ವಿವಿಧ ಆಡಿಯೊ ಉತ್ಪನ್ನಗಳ ಮೂಲಕ ಭಾರತೀಯ ಗ್ರಾಹಕರಿಗೆ ಪರಿಚಿತವಾಗಿದೆ. ಇದೀಗ ಇದೇ ಕಂಪನಿ ಮೊಬೈಲ್ ಫೋನ್ ಮಾರುಕಟ್ಟೆಗೆ ಕಾಲಿಡುತ್ತಿದೆ. Mivi One 5G ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಆಗಿದ್ದು, ಸೆಪ್ಟೆಂಬರ್ 24ರಂದು ಇದರ ಅಧಿಕೃತ ಬಿಡುಗಡೆ ನಡೆಯಲಿದೆ. ದೇಶೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಫೋನ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ಕಂಪನಿ ತಿಳಿಸಿದೆ.
ಸ್ನ್ಯಾಪ್‌ಡ್ರ್ಯಾಗನ್ 5ಜಿ ಬಳಕೆ
Mivi One 5Gಯ ಪ್ರಮುಖ ಆಕರ್ಷಣೆಗಳಲ್ಲಿ 5ಜಿ ಸಂಪರ್ಕವೂ ಒಂದಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಾಮ್‌ನ ಸ್ನ್ಯಾಪ್‌ಡ್ರ್ಯಾಗನ್ 5ಜಿ ಮೊಬೈಲ್ ಫ್ಲ್ಯಾಟ್ಫಾರಂ ಬಳಸಲಾಗುತ್ತದೆ ಎಂದು ಕಂಪನಿ ಈಗಾಗಲೇ ಖಚಿತಪಡಿಸಿದೆ. ಆದರೆ ಯಾವ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಅನ್ನು ಬಳಸಲಾಗಿದೆ ಎಂಬ ಮಾಹಿತಿಯನ್ನು ಮಿವಿ ಇನ್ನೂ ಬಹಿರಂಗಪಡಿಸಿಲ್ಲ. ಫೋನ್ ಬಿಡುಗಡೆಯ ಸಂದರ್ಭದಲ್ಲಿ ಈ ವಿವರವನ್ನು ಕಂಪನಿ ಪ್ರಕಟಿಸುವ ಸಾಧ್ಯತೆಯಿದೆ.
ಭಾರತದಲ್ಲೇ ನಡೆಯಲಿದೆ ತಯಾರಿಕೆ
Mivi One 5Gಯ ಮತ್ತೊಂದು ಪ್ರಮುಖ ಅಂಶವೆಂದರೆ ಇದರ ತಯಾರಿಕೆ ಭಾರತದಲ್ಲೇ ನಡೆಯಲಿದೆ. ಹೈದರಾಬಾದ್‌ನಲ್ಲಿರುವ ಕಂಪನಿಯ ಉತ್ಪಾದನಾ ವ್ಯವಸ್ಥೆಯನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್ ತಯಾರಿಸಲು ಮಿವಿ ಮುಂದಾಗಿದೆ. ಇದರ ಮೂಲಕ ದೇಶೀಯವಾಗಿ ಸ್ಮಾರ್ಟ್‌ಫೋನ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಕಂಪನಿಗಳ ಸಾಲಿಗೆ ಮಿವಿಯೂ ಸೇರ್ಪಡೆಯಾಗಲಿದೆ. ಕ್ವಾಲ್ಕಾಮ್, ಫ್ಲಿಪ್‌ಕಾರ್ಟ್ ಮತ್ತು ಗೂಗಲ್ ಜತೆಗೂ ಕಂಪನಿ ಸಹಭಾಗಿತ್ವ ಹೊಂದಿದೆ.
ಎರಡು ಕ್ಯಾಮೆರಾಗಳ ಗಮನ ಸೆಳೆಯುವ ವಿನ್ಯಾಸ
ಮಿವಿ ಬಿಡುಗಡೆ ಮಾಡಿರುವ ಟೀಸರ್‌ಗಳಲ್ಲಿ One 5Gಯ ವಿನ್ಯಾಸದ ಕೆಲವು ಮಾಹಿತಿಗಳು ಈಗಾಗಲೇ ಬಹಿರಂಗವಾಗಿವೆ. ಫೋನ್‌ನ ಹಿಂಭಾಗದಲ್ಲಿ ಎರಡು ದೊಡ್ಡ ವೃತ್ತಾಕಾರದ ಕ್ಯಾಮೆರಾ ಘಟಕಗಳನ್ನು ಜೋಡಿಸಿರುವುದು ಕಾಣಿಸುತ್ತದೆ. ಕ್ಯಾಮೆರಾಗಳ ಪಕ್ಕದಲ್ಲಿ ಮಾತ್ರೆ ಆಕಾರದ ಎಲ್‌ಇಡಿ ಫ್ಲ್ಯಾಶ್ ವ್ಯವಸ್ಥೆಯನ್ನೂ ನೀಡಲಾಗಿದೆ. ಸದ್ಯಕ್ಕೆ ಕ್ಯಾಮೆರಾಗಳ ಮೆಗಾಪಿಕ್ಸೆಲ್ ಸಾಮರ್ಥ್ಯ, ಬಳಸಿರುವ ಸಂವೇದಕಗಳ ವಿವರ ಹಾಗೂ ಮುಂಭಾಗದ ಕ್ಯಾಮೆರಾ ಕುರಿತು ಕಂಪನಿ ಸಂಪೂರ್ಣ ಮಾಹಿತಿ ನೀಡಿಲ್ಲ.
ಸರಳ ಆಂಡ್ರಾಯ್ಡ್ ಅನುಭವಕ್ಕೆ ಒತ್ತು
Mivi One 5Gಯಲ್ಲಿ ಸರಳ ಹಾಗೂ ಸ್ವಚ್ಛ ತಂತ್ರಾಂಶ ಅನುಭವ ನೀಡಲು ಕಂಪನಿ ಗಮನಹರಿಸಿರುವ ಸುಳಿವು ಸಿಕ್ಕಿದೆ. ಗೂಗಲ್ ಕೂಡ ಈ ಸ್ಮಾರ್ಟ್‌ಫೋನ್‌ನ ತಂತ್ರಜ್ಞಾನ ಸಹಭಾಗಿಯಾಗಿರುವುದರಿಂದ, ಬಳಕೆದಾರರಿಗೆ ಹೆಚ್ಚು ಸರಳವಾದ ಆಂಡ್ರಾಯ್ಡ್ ಅನುಭವ ದೊರೆಯುವ ನಿರೀಕ್ಷೆಯಿದೆ. ಆದರೆ ಫೋನ್‌ನಲ್ಲಿ ಯಾವ ಆಂಡ್ರಾಯ್ಡ್ ಆವೃತ್ತಿ ಇರಲಿದೆ, ಅದರ ಮೇಲೆ ಮಿವಿ ನೀಡುವ ಬಳಕೆದಾರ ಮುಖಪುಟ ಹೇಗಿರಲಿದೆ ಎಂಬುದನ್ನು ಕಂಪನಿ ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.
ಬೆಲೆ 15,000 ರೂಪಾಯಿಗಿಂತ ಕಡಿಮೆ ಇರಲಿದೆಯೇ?
Mivi One 5Gಯ ಅಧಿಕೃತ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಈ ಹಿಂದೆ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ, ಸ್ಮಾರ್ಟ್‌ಫೋನ್ 15,000 ರೂಪಾಯಿಗಿಂತ ಕಡಿಮೆ ಬೆಲೆ ವಿಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಬೆಲೆ ವಿಭಾಗದಲ್ಲಿ ಈಗಾಗಲೇ ರೆಡ್ಮಿ, ರಿಯಲ್‌ಮಿ, ಮೊಟೊರೊಲಾ, ಸ್ಯಾಮ್‌ಸಂಗ್, ಪೊಕೊ ಸೇರಿದಂತೆ ಹಲವು ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಹೀಗಾಗಿ ಮಿವಿ ಯಾವ ಬೆಲೆಯಲ್ಲಿ ತನ್ನ ಮೊದಲ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತದೆ ಎಂಬುದು ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಇಸ್ರೋದ ‘ನಾಟಿ ಬಾಯ್’ ಕಮಾಲ್ ; ಸರಣಿ ಹಿನ್ನಡೆಯ ನಡುವೆ ಭಾರತಕ್ಕೆ ಅಭೂತಪೂರ್ವ ಗೆಲುವು!



















