ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಪಿಎಫ್ ವಿತ್ ಡ್ರಾ ಮಾಡುವ ನಿಯಮಗಳು, ಆನ್ ಲೈನ್ ವ್ಯವಸ್ಥೆ ಮೂಲಕ ಪ್ರಕ್ರಿಯೆ ಸರಳಗೊಳಿಸಿದೆ. ಹಾಗೆಯೇ, ಇಪಿಎಫ್ಒ ಸದಸ್ಯರು ಮದುವೆಯಾದ ಬಳಿಕ ನಾಮಿನೇಷನ್ ಅಪ್ಡೇಟ್ ಮಾಡುವ ನಿಯಮಗಳನ್ನೂ ಬದಲಿಸಿದೆ. ಇಪಿಎಫ್ಒ ಸದಸ್ಯರೊಬ್ಬರು ಮದುವೆಯಾದ ಬಳಿಕ ಪತ್ನಿ, ಮಕ್ಕಳ ಹೆಸರನ್ನು ನಾಮನಿರ್ದೇಶನ ಮಾಡುವುದು ಪ್ರಮುಖವಾಗಿದೆ ಎಂದು “ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ 2026” ಅನ್ವಯ ಹೊಸ ನಿಯಮ ರೂಪಿಸಿದೆ.
ಮದುವೆಯ ನಂತರ ಸದಸ್ಯರು ತಮ್ಮ ಕುಟುಂಬದ ವಿವರಗಳನ್ನು ಸೇರಿಸಿ ಹೊಸದಾಗಿ ಇ-ನಾಮಿನೇಷನ್ (e-Nomination) ಸಲ್ಲಿಸುವುದು ಕಡ್ಡಾಯವಾಗಿದೆ. ಇಪಿಎಫ್ ಯೋಜನೆಯ ನಿಯಮಗಳ ಪ್ರಕಾರ, ಮದುವೆಗೆ ಮುಂಚೆ ಮಾಡಲಾಗಿದ್ದ ನಾಮಿನೇಷನ್ ಗೆ ಮದುವೆಯ ಬಳಿಕ ಕಾನೂನುಬದ್ಧ ಮಾನ್ಯತೆ ಇರುವುದಿಲ್ಲ. ಹಾಗಾಗಿ, ಪತ್ನಿ ಹಾಗೂ ಮಕ್ಕಳ ಹೆಸರನ್ನು ನಾಮಿನೇಷನ್ ಗೆ ಸೇರಿಸಬೇಕು ಎಂದು ತಿಳಿಸಲಾಗಿದೆ.
ಹಾಗಂತ, ಮದುವೆಯಾದ ತಕ್ಷಣ ಕಡ್ಡಾಯವಾಗಿ ಸಂಗಾತಿಯನ್ನೇ ನಾಮಿನಿಯಾಗಿ ಮಾಡಬೇಕು ಎಂದೇನಿಲ್ಲ. ನಿಯಮಗಳ ಪ್ರಕಾರ ಅರ್ಹ ಕುಟುಂಬದ ಸದಸ್ಯರನ್ನು ಅಥವಾ ಪೋಷಕರನ್ನು ನಾಮಿನಿ ಮಾಡಬಹುದು ಹಾಗೂ ಶೇಕಡವಾರು ಪಾಲು ಹಂಚಿಕೆ ಮಾಡಬಹುದು. ಆದರೆ ಕುಟುಂಬದ ಹೊರಗಿನವರನ್ನು ನಾಮಿನಿ ಮಾಡುವಂತಿಲ್ಲ. ಮದುವೆ ಪ್ರಮುಖ ಘಟ್ಟವಾಗಿರುವ ಕಾರಣ, ಮದುವೆಗೂ ಮೊದಲಿನ ನಾಮನಿರ್ದೇಶಿತರ ಹೆಸರುಗಳನ್ನು ಅಮಾನ್ಯಗೊಳಿಸಲಾಗುತ್ತದೆ.
ಹೊಸ ನಾಮಿನೇಷನ್ ಮಾಡದಿದ್ದರೆ, ಭವಿಷ್ಯದಲ್ಲಿ ಪಿಎಫ್, ಪಿಂಚಣಿ ಹಾಗೂ ವಿಮಾ ಸೌಲಭ್ಯಗಳ ಕ್ಲೇಮ್ ಪಡೆಯುವಾಗ ತೊಂದರೆ ಉಂಟಾಗಬಹುದು. ಹಾಗಾಗಿ, ಇಪಿಎಫ್ಒ ಸದಸ್ಯರು ಮದುವೆಯಾದ ಬಳಿಕ https://unifiedportal-mem.epfindia.gov.in/memberinterface/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಇ-ನಾಮಿನೇಷನ್ ಪ್ರಕ್ರಿಯೆ ಮುಗಿಸಬಹುದಾಗಿದೆ.
ಇದನ್ನೂ ಓದಿ : UPI ವಂಚನೆಗಳಿಗೆ ಬ್ರೇಕ್ : ಅನುಮಾನಾಸ್ಪದ ವಹಿವಾಟುಗಳಿಗೆ ಶೀಘ್ರದಲ್ಲೇ ಬರಲಿದೆ ಹೆಚ್ಚುವರಿ ‘Yes/No’ ದೃಢೀಕರಣ



















