ಬೆಂಗಳೂರು: ಆ್ಯಕ್ಸಿಸ್ ಬ್ಯಾಂಕ್ (Axis Bank) ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಎದುರಾಗಿದೆ. ಬ್ಯಾಂಕ್ ತನ್ನ ಉಳಿತಾಯ ಖಾತೆಗಳ (Savings Accounts) ನಿಯಮಗಳು ಹಾಗೂ ಶುಲ್ಕ ರಚನೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಪರಿಷ್ಕೃತ ನಿಯಮಗಳು ಮುಂಬರುವ ಡಿಸೆಂಬರ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿವೆ. ನಗದು ವಹಿವಾಟು ಮಿತಿಯಿಂದ ಹಿಡಿದು ರಿವಾರ್ಡ್ ಪಾಯಿಂಟ್ ಗಳವರೆಗೆ ಹಲವು ಸೇವೆಗಳು ಈಗ ದುಬಾರಿಯಾಗಲಿವೆ.
ಬ್ಯಾಂಕ್ ಖಾತೆಯಲ್ಲಿ ನಿಗದಿತ ಕನಿಷ್ಠ ಮೊತ್ತ (ಮಿನಿಮಮ್ ಬ್ಯಾಲೆನ್ಸ್) ಇರಬೇಕು. ಇಲ್ಲದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ. ಹಿಂದೆ ಗರಿಷ್ಠ ದಂಡವು ಸ್ಥಳಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿತ್ತು. ನಗರ ಮತ್ತು ಮೆಟ್ರೋ ಪ್ರದೇಶದಲ್ಲಿ 600 ರೂಪಾಯಿ, ಪಟ್ಟಣಗಳಲ್ಲಿ 300 ರೂಪಾಯಿ, ಗ್ರಾಮೀಣ ಪ್ರದೇಶದಲ್ಲಿ 150 ರೂಪಾಯಿ. ಈಗ ಎಲ್ಲ ಕಡೆ ಗರಿಷ್ಠ 600 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.
ಉದಾಹರಣೆಗೆ, ನಿಮ್ಮ ಖಾತೆಯಲ್ಲಿ 10,000 ರೂಪಾಯಿ ಕನಿಷ್ಠ ಬ್ಯಾಲೆನ್ಸ್ ಬೇಕು. ನೀವು 5,000 ರೂಪಾಯಿ ಮಾತ್ರ ಇಟ್ಟಿದ್ದರೆ , 5,000 ರೂಪಾಯಿಗೆ ಶೇ.6ರಷ್ಟು ಶುಲ್ಕ ವಿಧಿಸಲಾಗುತ್ತದೆ. ಆಗ ನೀವು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದ ಕಾರಣ 600 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ಅಲ್ಲದೆ, ಚೆಕ್ ಬೌನ್ಸ್ ಶುಲ್ಕಗಳು ಕೂಡ ಗಣನೀಯವಾಗಿ ಹೆಚ್ಚಾಗಿದ್ದು, ನೀಡಿದ ಪ್ರತಿ ಚೆಕ್ (Outward Cheque Return) ವಾಪಸಾದರೆ ಇನ್ನುಮುಂದೆ 200 ರೂ. ಶುಲ್ಕ ತೆರಬೇಕಾಗುತ್ತದೆ. ಇದಕ್ಕೂ ಮೊದಲು 50 ರೂಪಾಯಿಯಿಂದ 100 ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತಿತ್ತು. ಆ್ಯಕ್ಸಿಸ್ ಬ್ಯಾಂಕಿನ ಈ ಹೊಸ ಬದಲಾವಣೆಗಳು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದ್ದು, ಖಾತೆದಾರರು ಇಂದೇ ತಮ್ಮ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಎಚ್ಚೆತ್ತುಕೊಳ್ಳುವುದು ಒಳಿತು.


















