ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಸೋಮವಾರ ಸಂಜೆ ಈಜಲು ಹೋಗಿ ನಾಪತ್ತೆಯಾಗಿದ್ದ ದಾವಣಗೆರೆ ಮೂಲದ ಇಬ್ಬರು ಯುವಕರ ಶವ ಇಂದು ಬೆಳಗ್ಗೆ ಬಾಳೆಬೈಲು ಬೈಪಾಸ್ ಸೇತುವೆ ಸಮೀಪ ಪತ್ತೆಯಾಗಿದೆ. ಗಾರೆ ಕೆಲಸಕ್ಕಾಗಿ ತೀರ್ಥಹಳ್ಳಿಗೆ ಬಂದಿದ್ದ ಶಿವು (22 ವರ್ಷ) ಮತ್ತು ರುದ್ರೇಶ್ (24 ವರ್ಷ) ಮೃತಪಟ್ಟವರಾಗಿದ್ದಾರೆ.
ಸೋಮವಾರ ರಾತ್ರಿ ಕತ್ತಲೆಯಾದ ಕಾರಣ ಹುಡುಕಾಟಕ್ಕೆ ತೊಂದರೆಯಾಗಿತ್ತು, ಬಳಿಕ ಮಂಗಳವಾರ ಇಡೀ ದಿನ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ನಡೆದ ಹುಡುಕಾಟದಲ್ಲಿ ಇಬ್ಬರ ಶವ ಪತ್ತೆಯಾಗಿದ್ದು, ತೀರ್ಥಹಳ್ಳಿಯ ಶವಾಗಾರಕ್ಕೆ ರವಾನಿಸಲಾಗಿದೆ.


















