ಮುಂಬೈ : ಮುಂಬೈನ ಚೆಂಬೂರ್‌ನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅತ್ಯಂತ ಹೃದಯ ವಿದ್ರಾವಕ ಅವಘಡವೊಂದರಲ್ಲಿ, ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ 11 ವರ್ಷದ ಬಾಲಕನೊಬ್ಬ ದುರಂತ ಅಂತ್ಯ ಕಂಡಿದ್ದಾನೆ. ಘಟನೆಯಲ್ಲಿ ಇತರ ನಾಲ್ಕು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಮೃತ ಬಾಲಕನನ್ನು ವಿಹಾನ್ ಶ್ರೀವಾಸ್ತವ್ ಎಂದು ಗುರುತಿಸಲಾಗಿದ್ದು, ಈ ಘಟನೆಯು ಇಡೀ ಪ್ರದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇತ್ತ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.
ಮಗನಿಗಾಗಿ ಕಾಯುತ್ತಿರುವ ತಾಯಿ
ಮೃತ ವಿಹಾನ್ ಶ್ರೀವಾಸ್ತವ್ ಪ್ರತಿ ದಿನ ಶಾಲೆಯಿಂದ ಮನೆಗೆ ಮರಳಿದ ತಕ್ಷಣ ಕ್ರಿಕೆಟ್ ಆಡಲು ಹೋಗುತ್ತಿದ್ದ. ಅಪಘಾತ ಸಂಭವಿಸಿ ಗಂಟೆಗಳು ಕಳೆದರೂ, ಆತನ ತಾಯಿ ಜೂಹಿ ಮಗನ ಕ್ರಿಕೆಟ್ ಬ್ಯಾಟ್ ಅನ್ನು ಗಟ್ಟಿಯಾಗಿ ತಬ್ಬಿಕೊಂಡು ಶೂನ್ಯ ದೃಷ್ಟಿಯಿಂದ ಕುಳಿತಿರುವ ದೃಶ್ಯ ಎದೆ ಕಲಕುವಂತಿದೆ. ತನ್ನ ಮಗ ಇನ್ನೇನು ಮನೆಗೆ ಮರಳಿ ಬರುತ್ತಾನೆ, ಆಟವಾಡಲು ಹೋಗುತ್ತಾನೆ ಎಂಬ ನಂಬಿಕೆಯಲ್ಲಿರುವ ಆಕೆಗೆ ಸಾಂತ್ವನ ಹೇಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ವಿಹಾನ್ ತಾಯಿಗೆ ಅವನೇ ಪ್ರಪಂಚವಾಗಿದ್ದ. ಮಗ ಮನೆಯಿಂದ ಹೊರಗಿದ್ದಾಗಲೆಲ್ಲಾ ಆಕೆ ವಿಡಿಯೋ ಕರೆ ಮಾಡಿ ಆತನ ಯೋಗಕ್ಷೇಮ ವಿಚಾರಿಸುತ್ತಿದ್ದರು ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.
ಕ್ರಿಕೆಟಿಗನಾಗುವ ಕನಸು ಕಂಡಿದ್ದ ಬಾಲಕ
ನೇರ ನುಡಿ ಮತ್ತು ಉತ್ತಮ ಸಂಸ್ಕಾರ ಹೊಂದಿದ್ದ ವಿಹಾನ್ ಬಹಳ ಚುರುಕು ಹಾಗೂ ಬುದ್ಧಿವಂತನಾಗಿದ್ದ. ಭವಿಷ್ಯದಲ್ಲಿ ವೃತ್ತಿಪರ ಕ್ರಿಕೆಟಿಗನಾಗಬೇಕೆಂಬುದು ಆತನ ದೊಡ್ಡ ಕನಸಾಗಿತ್ತು. ಇದಕ್ಕಾಗಿ ದಿನವೂ ನೆರೆಹೊರೆಯವರ ಬಳಿ ತನಗೆ ಕ್ರಿಕೆಟ್ ತಂತ್ರಗಳನ್ನು ಹೇಳಿಕೊಡುವಂತೆ ವಿನಂತಿಸುತ್ತಿದ್ದ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಕ್ರಿಕೆಟ್ ಮೈದಾನದಲ್ಲಿ ಮಿಂಚಬೇಕಾಗಿದ್ದ ಬಾಲಕ, ಶಾಲೆಯಿಂದ ಮನೆಗೆ ಮರಳುವ ದಾರಿಯಲ್ಲೇ ಇಹಲೋಕ ತ್ಯಜಿಸಿದ್ದಾನೆ ಎಂದು ನೆರೆಹೊರೆಯವರು ಹೇಳಿ ದುಃಖಿಸಿದ್ದಾರೆ.
ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತ
ಚೆಂಬೂರ್‌ನ ಯುನಿವರ್ಸಲ್ ಶಾಲೆಯ ಬಸ್ 13 ಮಕ್ಕಳು ಮತ್ತು ಸಿಬ್ಬಂದಿಯೊಂದಿಗೆ ಸಂಚರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮರ ಬಿದ್ದ ತಕ್ಷಣ ಬಸ್ ನಿರ್ವಾಹಕ ಹಾಗೂ ಸ್ಥಳೀಯ ಸಾರ್ವಜನಿಕರು ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಬಸ್‌ನಿಂದ ಹೊರತೆಗೆದಿದ್ದಾರೆ. ಇದರಿಂದಾಗಿ ದೊಡ್ಡ ಮಟ್ಟದ ಪ್ರಾಣಹಾನಿ ತಪ್ಪಿದಂತಾಗಿದೆ. ತಕ್ಷಣವೇ ಗಾಯಗೊಂಡ ಐದು ಮಕ್ಕಳನ್ನು ಸಮೀಪದ ಜೆನ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರವಾಗಿ ಗಾಯಗೊಂಡಿದ್ದ ವಿಹಾನ್ ಅಷ್ಟರಲ್ಲೇ ಮೃತಪಟ್ಟಿದ್ದ ಎಂದು ವೈದ್ಯರು ದೃಢಪಡಿಸಿದ್ದರು. ಉಳಿದ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ರಾಯ್ ಪಟಾಕರ್ ಸ್ಪಷ್ಟಪಡಿಸಿದ್ದಾರೆ.
ತಾಯಿಯ ಸ್ಥಾನದಲ್ಲಿ ನಿಂತು ಭೇಟಿ ನೀಡಿದ ಮೇಯರ್
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ರಿತು ತಾವ್ಡೆ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದರು. ಮಗನನ್ನು ಕಳೆದುಕೊಂಡು ಆಘಾತಕೊಂಡಿದ್ದ ಪೋಷಕರ ಸ್ಥಿತಿ ಕಂಡು ಭಾವುಕರಾದ ಮೇಯರ್, “ಇದು ಅತ್ಯಂತ ನೋವಿನ ಸಂಗತಿ. ನಾನು ಇಲ್ಲಿಗೆ ಒಬ್ಬ ಮೇಯರ್ ಆಗಿ ಅಲ್ಲ, ಒಬ್ಬ ತಾಯಿಯಾಗಿ ಬಂದಿದ್ದೇನೆ. ಯುನಿವರ್ಸಲ್ ಶಾಲೆಯ ಬಸ್‌ನಲ್ಲಿದ್ದ 13 ಮಕ್ಕಳ ಪೈಕಿ 12 ಮಕ್ಕಳು ಸುರಕ್ಷಿತವಾಗಿದ್ದಾರೆ. ಆದರೆ ದುರದೃಷ್ಟವಶಾತ್ ಒಂದು ಮಗುವನ್ನು ನಾವು ಕಳೆದುಕೊಂಡಿದ್ದೇವೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಶಾಲೆಯಲ್ಲಿ ಗ್ಯಾಸ್ ಸೋರಿಕೆ – ಕ್ಷಣಾರ್ಧದಲ್ಲಿ ಬೆಂಕಿಗಾಹುತಿಯಾದ ಅಡುಗೆ ಕೋಣೆ!



















