ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಬೇಟೆಗಾರರು ಮೃತಪಟ್ಟಿರುವ ಘಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ರೈತರಿಗೆ ಇನ್ನೂ ನ್ಯಾಯ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಅರಣ್ಯ ಪ್ರದೇಶದಲ್ಲಿ ನಡೆದಿರುವ ಗುಂಡಿನ ದಾಳಿ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕಾನೂನು ಪ್ರಕಾರ ಆತ್ಮರಕ್ಷಣೆ ಹಾಗೂ ಕಾರ್ಯಾಚರಣೆಯ ಸಂದರ್ಭದಲ್ಲಿ ಗುಂಡು ಹಾರಿಸಲು ಹಲವು ನಿಯಮಗಳಿವೆ. ಆದರೆ ಮೂವರ ಮೇಲೂ ಗುಂಡು ಹಾರಿಸಿ ಕೊಲ್ಲುವ ಅಗತ್ಯ ಏನಿತ್ತು ಎಂದು ಪ್ರವೀಣ್ ಶೆಟ್ಟಿ ಪ್ರಶ್ನಿಸಿದ್ದಾರೆ. ಬೇಟೆಗಾರರು ತಪ್ಪಿಸಿಕೊಳ್ಳಲು ಯತ್ನಿಸಿದ್ದರೆ ಅವರನ್ನು ಬಂಧಿಸಲು ಬೇರೆ ಮಾರ್ಗಗಳನ್ನು ಬಳಸಬಹುದಿತ್ತು. ಕಾಲಿಗೆ ಗುಂಡು ಹಾರಿಸಿ ಬಂಧಿಸಬಹುದಾಗಿದ್ದ ಸಂದರ್ಭದಲ್ಲಿ ತಲೆ ಭಾಗಕ್ಕೆ ಗುಂಡು ಹಾರಿಸಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಮೂರು ಜೀವಗಳಿಗೆ ಬೆಲೆ ಇಲ್ಲವೇ?” ಎಂದು ಪ್ರಶ್ನಿಸಿರುವ ಪ್ರವೀಣ್ ಶೆಟ್ಟಿ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಇಂತಹ ಶಸ್ತ್ರಾಸ್ತ್ರಗಳನ್ನು ಬಳಸಲು ಅವಕಾಶ ನೀಡಿರುವುದರ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಅಧಿಕಾರ ಇಲಾಖೆಗೆ ಇದ್ದರೂ, ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಶಸ್ತ್ರಾಸ್ತ್ರ ಬಳಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಔಷಧಿ ಗಿಡ, ಸೊಪ್ಪು ಹಾಗೂ ಜಾನುವಾರುಗಳಿಗೆ ಮೇವು ತರಲು ಕಾಡಿಗೆ ತೆರಳುವ ರೈತರ ಮೇಲೂ ಅರಣ್ಯ ಸಿಬ್ಬಂದಿ ಗುಂಡು ಹಾರಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಅರಣ್ಯ ಪ್ರದೇಶಕ್ಕೆ ಜೀವನೋಪಾಯಕ್ಕಾಗಿ ತೆರಳುವ ಬಡವರು ಮತ್ತು ರೈತರ ಮೇಲೆ ಈ ರೀತಿಯ ಕ್ರಮಗಳು ನಡೆಯಬಾರದು. ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಸಂಘರ್ಷ ಉಂಟಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.
ಇನ್ನು, ಹನೂರು ಅರಣ್ಯದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಸರ್ಕಾರ ಒಟ್ಟು ₹5 ಕೋಟಿ ಪರಿಹಾರ ನೀಡಬೇಕು ಎಂದು ಪ್ರವೀಣ್ ಶೆಟ್ಟಿ ಒತ್ತಾಯಿಸಿದ್ದಾರೆ. ಜೊತೆಗೆ ಘಟನೆಗೆ ಕಾರಣರಾದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ಸರ್ಕಾರ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರವೀಣ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರೈತರು ಹಾಗೂ ಅರಣ್ಯ ಪ್ರದೇಶವನ್ನು ಅವಲಂಬಿಸಿರುವ ಜನರ ಜೀವ ಮತ್ತು ಹಕ್ಕುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಚಾ.ನಗರದಲ್ಲಿ ಅರಣ್ಯ ಸಿಬ್ಬಂದಿ ಎನ್‌ಕೌಂಟರ್‌ಗೆ ಮೂವರು ಬಲಿ ; ಸ್ಥಳೀಯರ ಆಕ್ರೋಶ.. DRFO ಕಚೇರಿ ಧ್ವಂಸ!



















