ನವದೆಹಲಿ : ದೇಶದ 80ನೇ ಸ್ವಾತಂತ್ರ್ಯೋತ್ಸವದ ಸುಸಂದರ್ಭದಲ್ಲಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಅಂಗಳದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಬಾರಿಯ ಅಧಿಕೃತ ಧ್ವಜಾರೋಹಣ ಸಮಾರಂಭದಲ್ಲಿ, ದೇಶದ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ಅನ್ನು ಪ್ರಥಮ ಬಾರಿಗೆ ಎಲ್ಲ 6 ಚರಣಗಳನ್ನೂ ಒಳಗೊಂಡು ಪೂರ್ಣ ಪ್ರಮಾಣದಲ್ಲಿ ನುಡಿಸಲಾಗಿದೆ.
ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೂ ಮುನ್ನ ಆರ್ಮಿ ಬ್ಯಾಂಡ್ ತಂಡವು ಈ ರಾಷ್ಟ್ರೀಯ ಗೀತೆಯನ್ನು ಅತ್ಯಂತ ವೈಭವೋಪೇತವಾಗಿ ಪ್ರಸ್ತುತಪಡಿಸಿತು. ಈ ಬಾರಿ ‘ವಂದೇ ಮಾತರಂ’ ಗೀತೆಗೆ 150 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಗೌರವವನ್ನು ನೀಡಲಾಗಿದೆ. ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ದೇಶೀಯವಾಗಿ ತಯಾರಿಸಿದ 105 ಎಂಎಂ ಲೈಟ್ ಫೀಲ್ಡ್ ಗನ್‌ಗಳ ಮೂಲಕ 21 ಕುಶಾಲತೋಪುಗಳ ಗೌರವ ಸಮರ್ಪಿಸಲಾಯಿತು.
ಇದೇ ವೇಳೆ ಭಾರತೀಯ ವಾಯುಪಡೆಯ ‘ಮಿ-17’ ಹೆಲಿಕಾಪ್ಟರ್‌ಗಳು ಕೆಂಪು ಕೋಟೆಯ ಮೇಲೆ ಪುಷ್ಪವೃಷ್ಟಿಗರೆದವು. ಇದರಲ್ಲಿ ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನು ಹೊತ್ತಿದ್ದರೆ, ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ‘ವಂದೇ ಮಾತರಂ’ ಎಂದು ಬರೆಯಲಾಗಿದ್ದ ಧ್ವಜ ರಾರಾಜಿಸಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಕೆಂಪು ಕೋಟೆಯಲ್ಲಿ ಈ ರೀತಿ ವಂದೇ ಮಾತರಂ ನುಡಿಸಿರುವುದು ಇದೇ ಮೊದಲು ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ರಾಷ್ಟ್ರಗೀತೆಗೆ ನೀಡುವ ಕಾನೂನು ಬದ್ಧ ಗೌರವ ‘ವಂದೇ ಮಾತರಂ’ಗೂ ವಿಸ್ತರಣೆ :
ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ದೇಶಪ್ರೇಮಿಗಳಲ್ಲಿ ನವಚೈತನ್ಯ ತುಂಬಿದ್ದ ‘ವಂದೇ ಮಾತರಂ’ ಗೀತೆಗೆ ಇತ್ತೀಚೆಗಷ್ಟೇ ರಾಷ್ಟ್ರಗೀತೆಗೆ ನೀಡಲಾಗುವಂತಹ ಸಮ್ಮಾನ ಹಾಗೂ ಕಾನೂನಾತ್ಮಕ ರಕ್ಷಣೆಯನ್ನು ವಿಸ್ತರಿಸಲಾಗಿದೆ. ಸಂಸತ್ತಿನಲ್ಲಿ ಅಂಗೀಕಾರಗೊಂಡ ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಮಸೂದೆ, 2026’ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಈ ಹೊಸ ಕಾಯ್ದೆಯನ್ವಯ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ಹಾಡುವುದಕ್ಕೆ ಅಡ್ಡಿಪಡಿಸಿದರೆ ಅಥವಾ ಅಪಮಾನಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯ ದಿನದ ಮುನ್ನಾದಿನ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಸ್ವದೇಶಿ ಚಳವಳಿಯ ಸಮಯದಲ್ಲಿ ವಂದೇ ಮಾತರಂ ಜನಸಾಮಾನ್ಯರ ಧ್ವನಿಯಾಗಿ ಬದಲಾಗಿತ್ತು ಎಂದು ಸ್ಮರಿಸಿಕೊಂಡಿದ್ದರು. ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ, ನಂತರ ಅವರ ‘ಆನಂದಮಠ’ ಕಾದಂಬರಿಯಲ್ಲಿ ಸೇರ್ಪಡೆಗೊಂಡ ಈ ಗೀತೆಯನ್ನು 1896ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಮೊದಲ ಬಾರಿಗೆ ಹಾಡಿದ್ದರು. 1905ರ ಆಗಸ್ಟ್ 7ರಂದು ಇದು ರಾಜಕೀಯ ಚಳವಳಿಯ ಪ್ರಮುಖ ಘೋಷಣೆಯಾಗಿ ಮಾರ್ಪಟ್ಟಿತ್ತು. ಇದೀಗ 150 ವರ್ಷಗಳ ಇತಿಹಾಸವಿರುವ ಈ ಗೀತೆಗೆ ಕೆಂಪು ಕೋಟೆಯಲ್ಲಿ ದೊರೆತ ಗೌರವ ದೇಶಾದ್ಯಂತ ಹೊಸ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ನಕ್ಸಲ್ ಮನಸ್ಥಿತಿಯವರನ್ನು ಗುರುತಿಸಿ, ಪ್ರತ್ಯೇಕಿಸಿ : ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಗುಡುಗು



















