ವಿಜಯನಗರ : ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಅಡುಗೆ ಕೋಣೆ ಬೆಂಕಿಗೆ ಆಹುತಿಯಾಗಿದೆ.
ಬಿಸಿಯೂಟ ತಯಾರಿಸುವ ವೇಳೆ ಗ್ಯಾಸ್ ಸೋರಿಕೆಯಾಗಿದ್ದು, ಅಡುಗೆ ಕೋಣೆ ತುಂಬೆಲ್ಲಾ ಬೆಂಕಿ ವ್ಯಾಪಿಸಿದೆ. ಘಟನೆಯ ವೇಳೆ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ವೇಳೆ ಶಾಲೆಯಲ್ಲಿದ್ದ ಫೈರ್ ಎಕ್ಸ್‌ಟಿಂಗ್ವಿಷರ್ ಅವಧಿ ಮುಗಿದಿದ್ದ ಕಾರಣ ಅದನ್ನು ಬಳಸಲು ಸಾಧ್ಯವಾಗಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸುಮಾರು ಮೂರು ವರ್ಷಗಳಿಂದ ಅದನ್ನು ಬದಲಾಯಿಸಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ. ಬಳಿಕ ಪಕ್ಕದ ಶಾಲೆಯಿಂದ ಫೈರ್ ಎಕ್ಸ್‌ಟಿಂಗ್ವಿಷರ್ ತಂದು ಗ್ರಾಮಸ್ಥರು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆಗೆ ಬಿಸಿಯೂಟ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೇ, ಅಥವಾ ಶಾಲಾ ಆಡಳಿತ ಹಾಗೂ ಶಿಕ್ಷಕರ ಬೇಜವಾಬ್ದಾರಿಯಿಂದ ಈ ಅವಘಡ ಸಂಭವಿಸಿತೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅವಧಿ ಮುಗಿದ ಅಗ್ನಿ ನಂದಿಸುವ ಸಾಧನವನ್ನು ಬದಲಾಯಿಸದೆ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ ; ಬೆಂಗಳೂರಲ್ಲಿ ಬಿಜೆಪಿ ಶಾಸಕನ ಆಪ್ತನಿಗೆ ಚಾಕು ಇರಿತ!



















