ಬೆಂಗಳೂರು : ಇದು ಸಾಮಾಜಿಕ ಜಾಲತಾಣಗಳ ಯುಗವಾಗಿರುವುದರಿಂದ ಅಸಲಿ ಸುದ್ದಿ, ಮಾಹಿತಿಯ ಜತೆಗೆ ನಕಲಿ ಸುದ್ದಿಗಳೂ ಅಷ್ಟೇ ವೇಗವಾಗಿ ಹರಡುತ್ತಿರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ, ದೇಶದಲ್ಲಿ 2005ಕ್ಕಿಂತ ಮೊದಲು ಮುದ್ರಣಗೊಂಡ 10, 20, 50, 100 ರೂಪಾಯಿ ಮೌಲ್ಯದ ನೋಟುಗಳನ್ನು ಬ್ಯಾನ್ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಕೇಂದ್ರ ಸರ್ಕಾರವು ತಕ್ಷಣವೇ ಈ ಸುದ್ದಿಯನ್ನು ತಳ್ಳಿಹಾಕಿದೆ.
ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ಘಟಕವಾದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ಮಾಡಿದ್ದು, ಇದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದೆ. ಜುಲೈ 1, 2026 ರಿಂದ ಹಳೆಯ ನೋಟುಗಳು ಬ್ಯಾನ್ ಆಗಲಿವೆ ಎಂಬುದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು. ನಿಮ್ಮ ಬಳಿ ಇರುವ ಎಲ್ಲ ಹಳೆಯ 10, 20, 50 ಮತ್ತು 100 ರೂಪಾಯಿ ನೋಟುಗಳು ಎಂದಿನಂತೆ ಚಲಾವಣೆಯಲ್ಲಿರುತ್ತವೆ. ಅವುಗಳು ಕೂಡ ಎಲ್ಲ ನೋಟುಗಳಂತೆ ಮಾನ್ಯವಾಗಿರುತ್ತವೆ” ಎಂದು ತಿಳಿಸಿದೆ.

“ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಚಿಲ್ಲರೆ ಸಿಗುವಂತಾಗಲು 100 ಮತ್ತು 200 ರೂಪಾಯಿ ನೋಟುಗಳ ಲಭ್ಯತೆಯನ್ನು ಹೆಚ್ಚಿಸಬೇಕು. ಎಟಿಎಂಗಳಲ್ಲಿ ಸಣ್ಣ ಮೊತ್ತದ ನೋಟುಗಳನ್ನು ಇಡಲು ಸೂಚಿಸಲಾಗಿದೆಯೇ ಹೊರತು, ಯಾವುದೇ ಹಳೆಯ ನೋಟುಗಳನ್ನು ರದ್ದುಗೊಳಿಸುವ ಆದೇಶ ನೀಡಿಲ್ಲ ಎಂಬುದಾಗಿ ಮಾತ್ರ ಆರ್ ಬಿಐ ನಿರ್ದೇಶನ ನೀಡಿದೆ” ಎಂದು ಪಿಐಬಿ ತಿಳಿಸಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಲೋಗೊ ಇರುವ ಹಾಗೂ 10, 20, 50, 100 ರೂಪಾಯಿ ಮೌಲ್ಯದ ನೋಟುಗಳನ್ನು ಬ್ಯಾನ್ ಮಾಡಲಾಗುತ್ತದೆ ಎಂಬ ಫೋಟೋ ಜಾಲತಾಣದಲ್ಲಿ ಹರಿದಾಡಿತ್ತು. ಹಾಗಾಗಿ ಪಿಐಬಿಯು ಫ್ಯಾಕ್ಟ್ ಚೆಕ್ ನಡೆಸಿದೆ. ಇಂತಹ ಸುಳ್ಳು ವದಂತಿಗಳನ್ನು ನಂಬಬೇಡಿ ಮತ್ತು ಬೇರೆಯವರಿಗೂ ಶೇರ್ ಮಾಡಬೇಡಿ. ಹಣಕಾಸಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಯಾವಾಗಲೂ ಆರ್ ಬಿಐ (rbi.org.in) ಅಧಿಕೃತ ವೆಬ್ ಸೈಟ್ ಅನ್ನು ಮಾತ್ರ ಗಮನಿಸಿ ಎಂದು ತಿಳಿಸಿದೆ.
ಇದನ್ನೂ ಓದಿ : ಗ್ರಾಹಕರ ಸೇವೆ ಸುಧಾರಿಸಲು ‘ಎಐ’ ತಂತ್ರಜ್ಞಾನದ ಮೊರೆ ಹೋದ ಟಾಟಾ ಮೋಟಾರ್ಸ್



















