ಪಾಟ್ನಾ: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದ ಉನ್ನತ ಅಧಿಕಾರಿ ದಂಪತಿಯ ಮನೆಗಳ ಮೇಲೆ ರಾಜ್ಯ ಜಾಗೃತ ದಳದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ಈ ವೇಳೆ ಭಾರೀ ಪ್ರಮಾಣದ ನಗದು ಹಾಗೂ ಆಸ್ತಿಪಾಸ್ತಿ ಪತ್ತೆಯಾಗಿದೆ.ಪಾಟ್ನಾದ ಎಡಿಎಂ (ಸರಬರಾಜು) ರವೀಂದ್ರ ಕುಮಾರ್ ದಿವಾಕರ್ ಮತ್ತು ಅವರ ಪತ್ನಿ, ದಾನಾಪುರದ ಜಿಲ್ಲಾ ಉಪನೋಂದಣಾಧಿಕಾರಿ (ಸಬ್-ರಿಜಿಸ್ಟ್ರಾರ್) ಕುಮಾರಿ ಸ್ವೀಟಿ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಈ ದಾಳಿ ನಡೆದಿದೆ. ರಾಜಧಾನಿ ಪಾಟ್ನಾ ಹಾಗೂ ದಂಪತಿಯ ತವರು ಜಿಲ್ಲೆಯಾದ ಬೇಗುಸರಾಯ್‌ನಲ್ಲಿರುವ ನಿವಾಸಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಜಾಗೃತ ದಳದ ತಂಡಗಳು ಪರಿಶೋಧನೆ ನಡೆಸಿವೆ.
ಕೋಟ್ಯಂತರ ಮೌಲ್ಯದ ನಗದು ಮತ್ತು ಆಭರಣ ಜಪ್ತಿ
ದಾಳಿಯ ವೇಳೆ ಒಟ್ಟು 1 ಕೋಟಿ ರೂಪಾಯಿಗೂ ಹೆಚ್ಚು ನಗದು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು, 48 ದುಬಾರಿ ವಾಚ್‌ಗಳು ಹಾಗೂ ಬೃಹತ್ ಪ್ರಮಾಣದ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಟ್ನಾ ನಿವಾಸ ಒಂದರಲ್ಲೇ 70 ಲಕ್ಷ ರೂಪಾಯಿ ನಗದು ಮತ್ತು 6 ಲಕ್ಷ ರೂಪಾಯಿ ಮೌಲ್ಯದ 48 ಐಷಾರಾಮಿ ವಾಚ್‌ಗಳು ಸಿಕ್ಕಿದ್ದರೆ, ಬೇಗುಸರಾಯ್ ಮನೆ ಹಾಗೂ ಇತರ ಸ್ಥಳಗಳಿಂದ 9 ಲಕ್ಷಕ್ಕೂ ಹೆಚ್ಚು ನಗದು ಸೇರಿದಂತೆ ಬೆಳ್ಳಿ-ಬಂಗಾರದ ಆಭರಣಗಳು ಪತ್ತೆಯಾಗಿವೆ. ಜಪ್ತಿಯಾದ ನೋಟುಗಳನ್ನು ಎಣಿಸಲು ವಿಶೇಷ ಯಂತ್ರಗಳನ್ನು ಸ್ಥಳಕ್ಕೆ ತರಿಸಲಾಗಿತ್ತು.
ಮಿಲಿಯನ್ ಗಟ್ಟಲೆ ಆಸ್ತಿ ಹೂಡಿಕೆ ಬಯಲು
ದಾಳಿ ವೇಳೆ ಸಿಕ್ಕಿರುವ ದಾಖಲೆಗಳ ಪ್ರಕಾರ, ರವೀಂದ್ರ ದಿವಾಕರ್ ತಮ್ಮ ಮತ್ತು ಪತ್ನಿಯ ಹೆಸರಿನಲ್ಲಿ ಪಾಟ್ನಾದಲ್ಲಿ 1.07 ಕೋಟಿ ರೂಪಾಯಿ ಮೌಲ್ಯದ ಎರಡು ಐಷಾರಾಮಿ ಫ್ಲ್ಯಾಟ್‌ಗಳಿವೆ. ಜೊತೆಗೆ ಪತ್ನಿ ಮತ್ತು ತಂದೆಯ ಹೆಸರಿನಲ್ಲಿ ಅಂದಾಜು 1.28 ಕೋಟಿ ರೂಪಾಯಿ ಮೌಲ್ಯದ ಮೂರು ನಿವೇಶನಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ ಜಾಗೃತ ದಳದ ಡಿಐಜಿ ಅವರ ನೇರ ಮೇಲ್ವಿಚಾರಣೆಯಲ್ಲಿ ಸಂಪೂರ್ಣ ಕಾರ್ಯಾಚರಣೆ ನಡೆದಿದೆ. ವಶಪಡಿಸಿಕೊಂಡ ನಗದು ಮತ್ತು ಚಿನ್ನಾಭರಣಗಳ ನಿಖರ ಮೌಲ್ಯವನ್ನು ಇಲಾಖೆಯ ಸಂಪೂರ್ಣ ತನಿಖೆಯ ನಂತರ ಅಧಿಕೃತವಾಗಿ ಘೋಷಿಸಲಾಗುವುದು. ಅಕ್ರಮ ಆಸ್ತಿ ಗಳಿಕೆ ಆರೋಪಗಳು ಸಾಬೀತಾದ ಬಳಿಕ ದಂಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ :ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್: ಸೆಮಿ ಫೈನಲ್‌ನಲ್ಲಿ ಶ್ರೀಲಂಕಾವನ್ನು ಎದುರಿಸಲಿರುವ ಭಾರತ!


















